ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಮಿಲಾದುನ್ನಬಿ ಆಚರಣೆ
ಉಡುಪಿ: ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ)ರವರ ಜನ್ಮದಿನ ಮಿಲಾದುನ್ನಬಿಯನ್ನು ಉಡುಪಿ ಜಿಲ್ಲೆಯಾದ್ಯಂತ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.
ಕಾಪು, ಉಚ್ಚಿಲ, ಎರ್ಮಾಳ್, ಮಲ್ಪೆ, ಪಡುಬಿದ್ರಿ, ದೊಡ್ಡಣಗುಡ್ಡೆ, ಕುಂದಾಪುರ, ಕೋಡಿ, ಬೈಂದೂರು, ಕಾರ್ಕಳ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆದ ಮಿಲಾದ್ ರ್ಯಾಲಿಯಲ್ಲಿ ಮದ್ರಸಗಳ ವಿದ್ಯಾರ್ಥಿಗಳು, ದಫ್ ತಂಡಗಳು ಗಮನ ಸೆಳೆದವು.
ಮಸೀದಿಯಿಂದ ಹೊರಟ ಜಾಥವು ಆಯಾ ಮಸೀದಿ ವ್ಯಾಪ್ತಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ವಾಪಾಸ್ಸು ಮಸೀದಿಗೆ ಆಗಮಿಸಿ ಸಮಾಪ್ತಿ ಗೊಂಡಿತು. ಬಳಿಕ ಮಸೀದಿಗಳಲ್ಲಿ ಅನ್ನದಾನವನ್ನು ಏರ್ಪಡಿಸಲಾಗಿತ್ತು
ನೇಜಾರು ಜುಮ್ಮಾ ಮಸೀದಿಯಿಂದ ನಡೆದ ಜಾಥದಲ್ಲಿ ಸಾಗಿ ಬಂದವರಿಗೆ ಕೆಳಾರ್ಕಳಬೆಟ್ಟು ಬಬ್ಬುಸ್ವಾಮಿ ದೇವಸ್ಥಾನ, ನೇಜಾರು ಮತ್ತು ಸಂತೆಕಟ್ಟೆ ರಿಕ್ಷಾ ಚಾಲಕರ ವತಿಯಿಂದ ರ‌್ಯಾಲಿಯಲ್ಲಿ ಸಾಗಿ ಬಂದವರಿಗೆ ತಂಪು ಪಾನೀಯ ವಿತರಿಸಲಾಯಿತು. ಗುರು ಗಣೇಶ್ ಕನ್ಸ್ಟ್ರಕ್ಷನ್ ಇವರಿಂದ ಸಿಹಿ ತಿಂಡಿ ವಿತರಿಸಲಾಯಿತು. ಮಸೀದಿಯಲ್ಲಿ ಬಳಿಕ ನಡೆದ ಅನ್ನದಾನದಲ್ಲಿ ಸರ್ವಧರ್ಮಿಯರು ಪಾಲ್ಗೊಂಡಿದ್ದರು
ಕಾಪು ತಾಲೂಕು: ಕಾಪು, ಮಜೂರು, ಮಲ್ಲಾರು, ಚಂದ್ರನಗರ, ಪಕೀರ್ಣಕಟ್ಟೆ ಸಹಿತ ವಿವಿಧ ಮಸೀದಿಗಳಿಂದ ಹೊರಟ ಮಿಲಾದ್ ಜಾಥಾವು ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಸಾಗಿ ಕೊಪ್ಪಲಂಗಡಿ ಮಸೀದಿ ಸೇರಿತು. ಅಲ್ಲಿಂದ ಹೊರಟ ಜಾಥವು ಕಾಪು ಪೇಟೆ ಮೂಲಕ ಸಾಗಿ ಕಾಪು ಪೊಲಿಪು ಜುಮ್ಮಾ ಮಸೀದಿಯಲ್ಲಿ ಜಾಥ ಸಮಾಪ್ತಿಗೊಂಡಿತು.
ವಿವಿಧ ದಫ್ ತಂಡಗಳು, ಮದ್ರಸ ವಿದ್ಯಾರ್ಥಿಗಳು, ನೂರಾರು ವಾಹನಗಳು ಜಾಥಾಕ್ಕೆ ಮೆರುಗು ನೀಡಿತು. ಈ ಸಂದರ್ಭದಲ್ಲಿ ಕಾಪು ಖಾಝಿ ಪಿ.ಬಿ.ಅಹಮ್ಮದ್ ಮುಸ್ಲಿಯಾರ್, ಪೊಲಿಪು ಮಸೀದಿ ಖತೀಬ್ ಇರ್ಷಾದ್ ಸಅದಿ ಹಾಜರಿದ್ದರು.
ಗಂಗೊಳ್ಳಿ ಜುಮ್ಮಾ ಮಸೀದಿಯಿಂದ ಹೊರಟ ಜಾಥವು ಬಂದರು ಬಸ್ ನಿಲ್ದಾಣದವರೆಗೆ ಸಾಗಿ ಬಳಿಕ ವಾಪಸ್ಸು ಮಸೀದಿಗೆ ಆಗಮಿಸಿ ಸಮಾಪ್ತಿಗೊಂಡಿತು.
ಸುಲ್ತಾನ್ ಮೊಹಲ್ಲಾ ಮದರಸದ ವಿದ್ಯಾರ್ಥಿಗಳಿಂದ ಪ್ರದರ್ಶನ ಹಾಗೂ ಸ್ಕೌಟ್ ವಿದ್ಯಾರ್ಥಿಗಳು ಗಮನಸೆಳೆದರು. ಮಿಲಾದು ನಬಿ ಆಚರಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ ಒದಗಿಸಲಾಗಿತ್ತು.

























