ಉಡುಪಿ ಜಿಲ್ಲಾಸ್ಪತ್ರೆಯ ಎಲ್ಲ 11 ಡಯಾಲಿಸೀಸ್ ಯಂತ್ರಗಳು ಸ್ಥಗಿತ: ಸರಕಾರದ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ
ಉಡುಪಿ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರು, ಸಂಸದರಾದ ಶೋಭಾ ಕರಂದ್ಲಾಜೆ ಶನಿವಾರ ಉಡುಪಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಡಯಾಲಿಸಿಸ್ ಕೇಂದ್ರವನ್ನು ಪರಿಶೀಲಿಸಿದರು.
ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ಕೆಲ ದಿನಗಳಿಂದ ಡಯಾಲಿಸಿಸ್ ಚಿಕಿತ್ಸೆ ಸ್ಥಗಿತಗೊಳಿಸಲಾಗಿದ್ದು ಇದರಿಂದ ರೋಗಿಗಳು ಚಿಕಿತ್ಸೆ ಇಲ್ಲದೆ ಪರದಾಡುವಂತಾಗಿದೆ. ಯಾವುದೇ ಮಾಹಿತಿ ನೀಡದೆ ಡಯಾಲಿಸಿಸ್ ಚಿಕಿತ್ಸೆ ಸ್ಥಗಿತಗೊಳಿಸಿದ ಏಜೆನ್ಸಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೇಂದ್ರ ಸಚಿವರು ಸೂಚಿಸಿದರು.
ಬಳಿಕ ಮಾತನಾಡಿದ ಅವರು, ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಬೆಡ್ ಗಳೆಲ್ಲ ಖಾಲಿ ಇದೆ. ಎಲ್ಲಾ 11 ಡಯಾಲಿಸೀಸ್ ಮಷೀನ್ ಗಳು ಕೂಡ ವರ್ಕ್ ಆಗುತ್ತಿಲ್ಲ. ಕಳೆದ ಒಂದು ತಿಂಗಳಿನಿಂದ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಎಸ್ ಕೆ ಸಂಜೀವಿನಿ ಏಜೆನ್ಸಿ ನಿರ್ವಹಣೆ ಮಾಡುತ್ತಿರುವ ರಾಜ್ಯದ 122 ಕೇಂದ್ರದ ಯಂತ್ರಗಳು ಸ್ಥಗಿತಗೊಂಡಿವೆ. ಅಕ್ಟೋಬರ್ 1ರಿಂದ ನಮ್ಮ ಸೇವೆ ನಿಲ್ಲಿಸುತ್ತೇವೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೊಸ ಮಷೀನ್ ಇಲ್ಲ, ರಿಪೇರಿ ಕಾರ್ಯ ಕೂಡ ಆಗುತ್ತಿಲ್ಲ ಎಂದು ದೂರಿದರು.
ರಾಜ್ಯದ ಬಡ ಕಿಡ್ನಿ ರೋಗಿಗಳ ಪರಿಸ್ಥಿತಿ ಏನಾಗಿದೆ ಗೊತ್ತಿಲ್ಲ. ಸಮಸ್ಯೆ ಗೊತ್ತಿದ್ದರೂ ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆ ಯಾಕೆ ಮಾಡಿಲ್ಲ. ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆಯಾ, ಬಡವರ ಗೋಳು ಕೇಳುತ್ತಿಲ್ಲವೇ? ಎಂದು ಅವರು ಪ್ರಶ್ನಿಸಿದರು.
ರಾಜ್ಯ ವಿನಂತಿ ಮಾಡಿದರೆ ಕೇಂದ್ರ ಸಹಕಾರ ಮಾಡುತ್ತದೆ. ಕೇಂದ್ರ ಸರ್ಕಾರ ಹಣ ಕೊಡಲು ಸಿದ್ಧವಿದೆ. ಹೊಸ ಯಂತ್ರಗಳು ಮತ್ತು ತರಬೇತಿಯನ್ನು ಕೇಂದ್ರ ಸರ್ಕಾರ ಕೊಡುತ್ತದೆ. ರಾಜ್ಯ ಸರ್ಕಾರ ನಾಲ್ಕೇ ತಿಂಗಳಲ್ಲಿ ದಿವಾಳಿಯಾಗಿದೆ. ಈ ಬಗ್ಗೆ ಕೇಂದ್ರಕ್ಕೆ ವಿನಂತಿ ಮಾಡಿದ್ದರೆ ನಮ್ಮ ಗಮನಕ್ಕೆ ತನ್ನಿ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಯಶ್ ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪ್ರಭಾರಿ ಶಸ್ತ್ರಚಿಕಿತ್ಸಕರಾದ ವೀಣಾ ಹಾಗೂ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

























