7:05 AM Tuesday 10 - November 2026

ಶಾರ್ಜಾದಲ್ಲಿ ಹತ್ಯೆಗೀಡಾದ ಕುಂದಾಪುರದ ಆಲ್ವಿನ್ ಪ್ರಕಾಶ್ ಕುಂದರ್ ಪಾರ್ಥಿವ ಶರೀರ ತವರಿಗೆ

alvin prakash kunder
25/09/2026

ಉಡುಪಿ: ಯುಎಇಯ ಶಾರ್ಜಾದಲ್ಲಿ ಬರ್ಬರ ಹತ್ಯೆಗೀಡಾಗಿದ್ದ ಕುಂದಾಪುರ ತಾಲೂಕಿನ ಹೊನ್ನನಕೇರಿ ನಿವಾಸಿ ಆಲ್ವಿನ್ ಪ್ರಕಾಶ್ ಕುಂದರ್ ಅವರ ಪಾರ್ಥಿವ ಶರೀರ ಶುಕ್ರವಾರ ತವರಿಗೆ ತಲುಪಿದೆ.

ಮೃತರ ಪಾರ್ಥಿವ ಶರೀರವನ್ನು ಹೊನ್ನನಕೇರಿಯಲ್ಲಿರುವ ಅವರ ನಿವಾಸಕ್ಕೆ ತರಲಾಗಿದ್ದು, ಕುಟುಂಬಸ್ಥರು, ಬಂಧುಗಳು ಹಾಗೂ ಆಪ್ತರು ಅಂತಿಮ ದರ್ಶನ ಪಡೆದರು. ಮನೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಕಂಬನಿ ಮಿಡಿದರು. ಬಳಿಕ ಪ್ರೊಟೆಸ್ಟಂಟ್ ಸಿ.ಎಸ್.ಐ. ಕೃಪಾ ಚರ್ಚ್‌ನಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ.

ಕುಂದಾಪುರದ ಆಲ್ವಿನ್ ಪ್ರಕಾಶ್ ಕುಂದರ್ ಕಳೆದ ಜುಲೈ ತಿಂಗಳಲ್ಲಿ ಶಾರ್ಜಾದಲ್ಲಿ ನಿಗೂಢವಾಗಿ ಹತ್ಯೆಗೀಡಾಗಿದ್ದರು. ಶಾರ್ಜಾ ಏರ್‌ ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು, ಜುಲೈ 20ರ ಸುಮಾರಿಗೆ ತಮ್ಮ ಸಹೋದರರನ್ನು ಸಂಪರ್ಕಿಸಲು ಯತ್ನಿಸಿದ್ದರು. ಆದರೆ ಆ ಬಳಿಕ ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿತ್ತು.

ಕುಟುಂಬಸ್ಥರು ಆತಂಕಗೊಂಡು ವಿಚಾರಿಸಿದಾಗ, ಪ್ರಕಾಶ್ ಭಾರತಕ್ಕೆ ತೆರಳಿರುವುದಾಗಿ ಅವರು ಕೆಲಸ ಮಾಡುತ್ತಿದ್ದ ಕಂಪನಿಯಿಂದ ಮಾಹಿತಿ ಲಭಿಸಿತ್ತು. ಆದರೆ ಅವರು ಊರಿಗೆ ಬಾರದ ಹಿನ್ನೆಲೆಯಲ್ಲಿ ಶಾರ್ಜಾದಲ್ಲಿ ಪ್ರಕರಣ ದಾಖಲಿಸಿ ಹುಡುಕಾಟ ನಡೆಸಲಾಗಿತ್ತು. ಈ ವೇಳೆ ಹುಡುಕಾಟದ ಸಮಯದಲ್ಲಿ ಪ್ರಕಾಶ್ ಅವರದೇ ಕಾರಿನಲ್ಲಿ ಇರಿತದ ಗಾಯಗಳೊಂದಿಗೆ ಮೃತದೇಹ ಪತ್ತೆಯಾಗಿತ್ತು. ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ ಬ್ಯಾಗ್‌ ಗಳಲ್ಲಿ ತುಂಬಿಸಿಟ್ಟಿರುವ ಬಗ್ಗೆಯೂ ಮಾಹಿತಿ ಹೊರಬಂದಿತ್ತು.

ಈ ಭೀಕರ ಹತ್ಯೆ ಪ್ರಕರಣದಲ್ಲಿ ಪ್ರಕಾಶ್ ಅವರ ಪತ್ನಿ ಟೀನಾ ಹಾಗೂ ಅಪ್ರಾಪ್ತ ಪುತ್ರ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಹಾಗೂ ತನಿಖೆಗೆ ಕಾರಣವಾಗಿದೆ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler
Exit mobile version