7:44 AM Thursday 18 - September 2025

ಮೈಸೂರು ಮೃಗಾಲಯ ವಾರ್ತಾ ಪತ್ರ, ವಾರ್ಷಿಕ ವರದಿ ಬಿಡುಗಡೆ

kandre1
02/09/2023

ಬೆಂಗಳೂರು, ಸೆ.2: ಮೈಸೂರಿನಲ್ಲಿರುವ ಜಗದ್ವಿಖ್ಯಾತ ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಬೆಂಗಳೂರು ಹೊರ ವಲಯ ಬನ್ನೇರುಘಟ್ಟದಲ್ಲಿರುವ ಮೃಗಾಲಯಗಳ ಸಮಗ್ರ ಅಭಿವೃದ್ಧಿಗಾಗಿ ಮಹಾ ಯೋಜನೆ (ಮಾಸ್ಟರ್ ಪ್ಲಾನ್) ರೂಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ತಮ್ಮ ಕಚೇರಿಯಲ್ಲಿ ನಡೆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ರಾಜ್ಯದ ಮೃಗಾಲಯಗಳ ಬಗ್ಗೆ ವಿಶ್ವಾದ್ಯಂತ ಉತ್ತಮ ಹೆಸರಿದೆ. ಮೃಗಾಲಯದಲ್ಲಿರುವ ಪ್ರಾಣಿಗಳ ಸಂತಾನೋತ್ಪತ್ತಿಯ ಪ್ರಮಾಣವೂ ಉತ್ತಮವಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ವನ್ಯ ಮೃಗಗಳ ರಕ್ಷಣೆಗೆ ಮತ್ತು ಇಂದಿನ ಮಕ್ಕಳಿಗೆ ವಿವಿಧ ಪ್ರಾಣಿಸಂಕುಲ ಮತ್ತು ಸಸ್ಯ ಸಂಕುಲದ ಬಗ್ಗೆ ಮಾಹಿತಿ ನೀಡುವ ಮೃಗಾಲಯಗಳನ್ನು ಇನ್ನೂ ಹೆಚ್ಚು ಮಾಹಿತಿಪೂರ್ಣ ಮತ್ತು ಪ್ರೇಕ್ಷಕ ಸ್ನೇಹಿಯಾಗಿ ಮಾಡಲು ಸಮಗ್ರ ನೀತಿ ರೂಪಿಸುವ ಅಗತ್ಯವನ್ನು ಪ್ರತಿಪಾದಿಸಿದರು.

ಗದಗ, ಕಲ್ಬುರ್ಗಿಯಲ್ಲಿರುವ ಮೃಗಾಲಯಗಳನ್ನು ಮೇಲ್ದರ್ಜೆಗೇರಿಸುವ ಅಗತ್ಯವಿದ್ದು, ಈ ಬಗ್ಗೆ ಸಮಗ್ರ ವರದಿ ತಯಾರಿಸಿ ಸಲ್ಲಿಸುವಂತೆಯೂ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.ಬೀದರ್ ಜಿಲ್ಲೆಯಲ್ಲಿ ದಟ್ಟ ಅಡವಿ ಇಲ್ಲದ ಕಾರಣ ಮಕ್ಕಳಿಗೆ ವನ್ಯ ಮೃಗಗಳ ಬಗ್ಗೆ ನೈಜ ಮಾಹಿತಿ ಇಲ್ಲ. ಬೀದರ್ ನಲ್ಲಿ ಕೃಷ್ಣ ಮೃಗಗಳ ಸಂರಕ್ಷಿತ ಪ್ರದೇಶ ನಿರ್ಮಿಸುವ ಬಗ್ಗೆ ಈ ಬಾರಿಯ ಬಜೆಟ್ ನಲ್ಲಿ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಘೋಷಣೆ ಮಾಡಿದ್ದು, ಇದರ ಜೊತೆಗೆ ಜಿಲ್ಲೆಯಲ್ಲಿ ಮೃಗಾಲಯ ಸ್ಥಾಪನೆ ಮಾಡಿದರೆ, ಇಂದಿನ ಪೀಳಿಗೆಗೆ ವನ್ಯ ಮೃಗಗಳನ್ನು ನೋಡಲು ಮತ್ತು ಅವುಗಳ ಬಗ್ಗೆ ತಿಳಿಯಲು ಅವಕಾಶ ಆಗುತ್ತದೆ. ಈ ಹಿನ್ನೆಲೆಯಲ್ಲಿ ಮೃಗಾಲಯ ಸ್ಥಾಪನೆಗೆ ಕ್ರಿಯಾ ಯೋಜನೆ ರೂಪಿಸುವಂತೆ ಆದೇಶಿಸಿದರು.

ಇದೇ ಸಂದರ್ಭದಲ್ಲಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ 2022-23ನೇ ಸಾಲಿನ ವಾರ್ಷಿಕ ವರದಿ ಮತ್ತು ತ್ರೈಮಾಸಿಕ ವಾರ್ತಾ ಪತ್ರವನ್ನು ಸಚಿವರು ಬಿಡುಗಡೆ ಮಾಡಿದರು.ಸಭೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಹಿರಿಯ ಐ.ಎಫ್.ಎಸ್. ಅಧಿಕಾರಿಗಳಾದ ರಾಜೀವ್ ರಂಜನ್, ಸುಭಾಷ್ ಮಾಲ್ಕೆಡೆ, ರವಿ, ಸಂಜಯ್ ಬಿಜ್ಜೂರ್, ಕುಮಾರ್ ಪುಷ್ಕರ್, ಎ.ಕೆ. ಸಿಂಗ್ ಮತ್ತಿತರರು ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

Exit mobile version