ಕೇಸರಿ ದರ್ಬಾರ್: ಮಧ್ಯಪ್ರದೇಶ, ಛತ್ತೀಸ್ ಗಢದ ನೂತನ ಮುಖ್ಯಮಂತ್ರಿಗಳಿಂದ ಇಂದು ಪ್ರಮಾಣ ವಚನ; ಮೋದಿ, ಅಮಿತ್ ಶಾ ಆಗಮನ

ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳು ಐತಿಹಾಸಿಕ ನಾಯಕತ್ವ ಬದಲಾವಣೆಗೆ ಸಾಕ್ಷಿಯಾಗಲಿದ್ದು, ಬಿಜೆಪಿಯ ಮೋಹನ್ ಯಾದವ್ ಮತ್ತು ವಿಷ್ಣು ದೇವ್ ಸಾಯಿ ಬುಧವಾರ ಹೊಸ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಭೋಪಾಲ್ ನ ಲಾಲ್ ಪೆರೇಡ್ ಮೈದಾನ ಮತ್ತು ರಾಯ್ಪುರದ ವಿಜ್ಞಾನ ಕಾಲೇಜು ಮೈದಾನದಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಈ ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವಾರು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಅವರೊಂದಿಗೆ ಪಕ್ಷದ ಇತರ ಅಧಿಕಾರಿಗಳು, ಕೇಂದ್ರ ಸಚಿವರು, ರಾಜ್ಯ ಅಧ್ಯಕ್ಷರು ಮತ್ತು ದೇಶಾದ್ಯಂತದ ಮುಖ್ಯಮಂತ್ರಿಗಳು ಸಹ ಸೇರಲಿದ್ದಾರೆ. ಹೆಚ್ಚಿನ ಸಂಖ್ಯೆಯ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಭೋಪಾಲ್‌ನಲ್ಲಿ ನಡೆಯುವ ಸಮಾರಂಭಕ್ಕೆ ಬಿಜೆಪಿ ರಾಜ್ಯ ಅಧ್ಯಕ್ಷ ವಿ.ಡಿ.ಶರ್ಮ ಎಲ್ಲರನ್ನೂ ಸ್ವಾಗತಿಸಿದ್ದಾರೆ. “ಹೊಸದಾಗಿ ನಿಯೋಜಿತಗೊಂಡಿರುವ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಅವರ ಕ್ಯಾಬಿನೆಟ್ ಬುಧವಾರ ಮೋತಿಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಉಪಸ್ಥಿತಿಯಲ್ಲಿ ಇದನ್ನು ಆಯೋಜಿಸಲಾಗುತ್ತದೆ” ಎಂದಿದ್ದಾರೆ.