2024ರ ಚುನಾವಣೆಯಲ್ಲಿ  ಮಹಿಳೆಯರಿಗೆ ಮೀಸಲಾತಿ ಸಿಗಲ್ಲ, ಇದು ಕೇಂದ್ರದ ಮೋಸದ ನಡೆ: ಎಎಪಿ

kushala swamy
20/09/2023

ಬೆಂಗಳೂರು:ಲೋಕಸಭೆಯಲ್ಲಿ ಮಂಡಿಸಿರುವ ನಾರಿ ಶಕ್ತಿ ವಂದನಾ ಅಧಿನಿಯಮವು ಕೇಂದ್ರ ಸರ್ಕಾರದ ಮೋಸದ ನಡೆಯಾಗಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯು ಅಂಗೀಕಾರಗೊಂಡರೂ 2024ರ ಚುನಾವಣೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಸಿಗಲು ಸಾಧ್ಯವಿಲ್ಲ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ  ಮಹಿಳಾ ಘಟಕದ ಅಧ್ಯಕ್ಷೆ ಕುಶಲಾ ಸ್ವಾಮಿ ಪ್ರತಿಪಾದಿಸಿದರು.

ಮಹಿಳಾ ಮೀಸಲಾತಿ ವಿಚಾರವಾಗಿ ಬೆಂಗಳೂರಲ್ಲಿ ಮಂಗಳವಾರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕುಶಲಾ ಸ್ವಾಮಿ, ಮಸೂದೆಯಲ್ಲಿ ಸೇರಿಸಲಾಗಿರುವ ಕ್ಷೇತ್ರ ಮರು ವಿಂಗಡಣೆ ಮತ್ತು ಗಣತಿ ನಿಬಂಧನೆಗಳನ್ನು ತೆಗೆದು 2024ರ ಲೋಕಸಭೆ ಚುನಾವಣೆಗೂ ಮುನ್ನವೇ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಮಹಿಳೆಯರನ್ನು ಮೂರ್ಖರನ್ನಾಗಿಸುವ ಮಸೂದೆ ಇದು. ಮಸೂದೆಯ ನಿಬಂಧನೆಗಳನ್ನು ಸೂಕ್ಷ್ಮವಾಗಿ ಓದಿದರೆ ಬಿಜೆಪಿಯ ಕಳ್ಳಾಟ ಬಹಿರಂಗವಾಗುತ್ತದೆ. ಮಸೂದೆ ಪ್ರಕಾರ, ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಮುಗಿಸಿದ ಬಳಿಕ ಸಮೂದೆ ಜಾರಿಗೆ ಬರಲಿದೆ.  15 ವರ್ಷಗಳ ವರೆಗೆ ಜಾರಿಯಲ್ಲಿರಲಿದೆ. ಮಹಿಳೆಯರ ಯೋಗಕ್ಷೇಮ ಮತ್ತು ಮಹಿಳೆಯರ ಕಲ್ಯಾಣದ ಬಗ್ಗೆ ಬಿಜೆಪಿಗೆ ಆಸಕ್ತಿ ಇದ್ದರೆ  ಕ್ಷೇತ್ರ ಮರು ವಿಂಗಡಣೆ ಮತ್ತು ಗಣತಿ ನಿಬಂಧನೆಗಳನ್ನು ಜಾರಿಗೊಳಿಸಲಿ ಎಂದು ಕುಶಾಲಾ ಸ್ವಾಮಿ ಸವಾಲು ಹಾಕಿದರು.

2024ರ ಲೋಕಸಭೆ ಚುನಾವಣೆ ಹತ್ತಿರದಲ್ಲೇ ಇದೆ. ಆದರೆ ಈ ಬಿಲ್‌ ಅನುಷ್ಠಾನಗೊಳಿಸಬೇಕು ಎಂದರೆ ಮೊದಲು ಜನಗಣತಿ ನಡೆಸಬೇಕು. ಜನಗಣತಿಯ ವರದಿ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆಯಾಗುತ್ತದೆ. ಕ್ಷೇತ್ರ ಮರುವಿಂಗಡಣೆ ಆಧಾರದ ಮೇಲೆ ಮಹಿಳೆಯರಿಗೆ ಮೀಸಲಾತಿ ನೀಡಬೇಕಾಗುತ್ತದೆ. ಜನಗಣತಿಯನ್ನು ನಡೆಸಲು ಏನೆಲ್ಲವೆಂದರೂ 1 ವರ್ಷ ಹಿಡಿಯುತ್ತದೆ. ಆದಾದ ನಂತರ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ದೆಹಲಿಯ ಮುನ್ಸಿಪಾಲಿಟಿ ಕಾರ್ಪೋರೇಷನ್‌(ಎಂಸಿಡಿ) ನಂತಹ ಸಣ್ಣ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಗೆ ಚುನಾವಣಾ ಆಯೋಗವು ಕನಿಷ್ಠ 6 ತಿಂಗಳನ್ನು ತೆಗೆದುಕೊಂಡಿದೆ. ಇಡೀ ದೇಶದಲ್ಲಿ ಡಿಲಿಮಿಟೇಶನ್‌ ಪ್ರಕ್ರಿಯೆ ಪೂರ್ಣಗೊಳಿಸಲು 2 ವರ್ಷ ಬೇಕಾಗುತ್ತದೆ. ವಿಚಾರ ಹೀಗಿರುವಾಗ ದಿಢೀರ್‌ ಆಗಿ ಮಹಿಳೆಯರಿಗೆ ಮೀಸಲಾತಿ ಮಸೂದೆಯನ್ನು ಮಂಡಿಸಿದ್ದು ಏಕೆ? ಇದರ ಹಿಂದೆ ಸದುದ್ದೇಶಕ್ಕಿಂತ ದುರುದ್ದೇಶವೇ ಹೆಚ್ಚಿದೆ. ಕೇವಲ ಚನಾವಣೆಯಲ್ಲಿ ಮಹಿಳೆಯರನ್ನು ಮೀಸಲಾತಿ ಹೆಸರಲ್ಲಿ ವಂಚಿಸಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಕುಶಾಲಾ ಸ್ವಾಮಿ ಆರೋಪಿಸಿದರು.

ಇದು ಒಂದು ರೀತಿಯಲ್ಲಿ ದಿನಾಂಕವನ್ನೇ ಗೊತ್ತು ಮಾಡದೆ ಮದುವೆ ಮಾಡಿಸುತ್ತೇವೆ ಎಂದು ಹೇಳಿದಂತಿದೆ. ಈ ಮಸೂದೆ ಎಂದಿನಿಂದ ಜಾರಿಗೆ ಬರುತ್ತದೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು. ಮುಂಬರುವ ಚುನಾವಣೆಯಲ್ಲಿ ಮೀಸಲಾತಿ ಒದಗಿಸುವುದು ಅಸಾಧ್ಯ ಎಂಬಂತಿರುವಾಗ ತರಾತುರಿಯಲ್ಲಿ ಈ ಮಸೂದೆ ಮಂಡಿಸುವ ಜರೂರತ್ತು ಏನಿತ್ತು? ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

ಇತ್ತೀಚಿನ ಸುದ್ದಿ

Exit mobile version