2:12 PM Saturday 18 - October 2025

ಇದು ಸತ್ಯ: ಸಂಬಳ ಸಿಗದೇ 18 ತಿಂಗಳಾಯ್ತು; ರಸ್ತೆ ಬದಿಯಲ್ಲಿ ಇಡ್ಲಿ ಮಾರುತ್ತಿರುವ ಚಂದ್ರಯಾನ 3 ರ ಲಾಂಚ್‌ ಪ್ಯಾಡ್‌ ನಿರ್ಮಿಸಿದ್ದ ತಂತ್ರಜ್ಞ..!

19/09/2023

ಇದನ್ನು ದುರಂತ ಅನ್ನಬೇಕೋ, ಹಣೆಬರಹ ಅನ್ನಬೇಕೋ ಗೊತ್ತಾಗುತ್ತಿಲ್ಲ. ಇತ್ತೀಚಿಗೆ ನಾವೆಲ್ಲಾ ಚಂದ್ರಯಾನ ಸಕ್ಸಸ್ ಬಗ್ಗೆ ಖುಷಿಪಟ್ವಿ. ಆದರೆ ಅದರ ಬೆನ್ನಲ್ಲೇ ದುಃಖದ ವಿಚಾರವೊಂದು ಬಯಲಾಗಿದೆ. ಹೌದು. ಇಸ್ರೋದ ಚಂದ್ರಯಾನ 3 ರ ಲಾಂಚ್‌ ಪ್ಯಾಡ್‌ ನಿರ್ಮಿಸಲು ಕೆಲಸ ಮಾಡಿದ್ದ ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿನ ತಂತ್ರಜ್ಞರೊಬ್ಬರು ಝಾರ್ಖಂಡ್ ನ ರಸ್ತೆಬದಿಯ ಅಂಗಡಿಯಲ್ಲಿ ಇಡ್ಲಿಗಳನ್ನು ಮಾರುತ್ತಿರುವ ಘಟನೆ ‌ಬೆಳಕಿಗೆ ಬಂದಿದೆ.

ದೀಪಕ್‌ ಕುಮಾರ್‌ ಉಪ್ರಾರಿಯಾ ಎಂಬುವವರು ರಸ್ತೆ ಬದಿಯಲ್ಲಿ ಇಡ್ಲಿ ಮಾರುತ್ತಿವವರು. ಇವರು ರಾಂಚಿಯ ಧುರ್ವಾ ಪ್ರದೇಶದಲ್ಲಿ ಹಳೆಯ ಶಾಸನ ಸಭೆಯ ಎದುರು ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಚಂದ್ರಯಾನ-3ಗಾಗಿ ಫೋಲ್ಡಿಂಗ್ ಪ್ಲಾಟ್‌ಫಾರ್ಮ್ ಮತ್ತು ಸ್ಲೈಡಿಂಗ್ ಡೋರ್ ಅನ್ನು ತಯಾರಿಸಿದ ಇವರಿಗೆ 18 ತಿಂಗಳಾದರೂ ಸಂಬಳವನ್ನು ಪಾವತಿಸದ ಹಿನ್ನೆಲೆಯಲ್ಲಿ ಇವರು ಬದುಕಿಗಾಗಿ ರಸ್ತೆ ಬದಿಯಲ್ಲಿ ಅಂಗಡಿಯನ್ನು ತೆರೆದಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಉಪ್ರಾರಿಯಾ ಅವರು, ಕಳೆದ ಕೆಲವು ದಿನಗಳಿಂದ ಇಡ್ಲಿಗಳನ್ನು ಮಾರುತ್ತಿದ್ದೇನೆ. ಅಂಗಡಿ ಮತ್ತು ಕಚೇರಿಯ ಕೆಲಸಗಳನ್ನು ಒಟ್ಟಿಗೆ ನಿರ್ವಹಿಸುತ್ತಿದ್ದೇನೆ. ಬೆಳಗ್ಗೆ ಇಡ್ಲಿ ಮಾರಾಟ ಮಾಡಿ, ಮಧ್ಯಾಹ್ನ ಕಚೇರಿಗೆ ಹೋಗುತ್ತೇನೆ. ಸಂಜೆ ಮನೆಗೆ ಹಿಂದಿರುಗುವ ಮೊದಲು ಮತ್ತೆ ಇಡ್ಲಿಗಳನ್ನು ಮಾರುತ್ತೇನೆ ಎಂದರು.

18 ತಿಂಗಳಾದರೂ ಸಂಬಳ ಪಾವತಿಸದ ಹಿನ್ನೆಲೆಯಲ್ಲಿ ಮನೆ ನಿರ್ವಹಣೆ ತುಂಬಾ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕ್ರೆಡಿಟ್ ಕಾರ್ಡ್‌ ನಲ್ಲಿ ಹಾಗೂ ಸಂಬಂಧಿಕರು ಸೇರಿ ಈವರೆಗೆ ನಾನು 4 ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ. ಅಷ್ಟೇ ಅಲ್ಲದೇ ಪತ್ನಿಯ ಆಭರಣವನ್ನು ಅಡವಿಟ್ಟು ಕೆಲವು ದಿನ ಮನೆ ನಡೆಸಿದ್ದೆ. ಇದೀಗ ಇಡ್ಲಿ ಮಾರಾಟ ಮಾಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

‘ನನ್ನ ಪತ್ನಿ ಚೆನ್ನಾಗಿ ಇಡ್ಲಿಗಳನ್ನು ಮಾಡುತ್ತಾಳೆ. ಅವುಗಳನ್ನು ಮಾರಾಟ ಮಾಡುವುದರಿಂದ ನನಗೆ ಪ್ರತಿದಿನ 300 ರಿಂದ 400 ರೂ.ಗಳು ಸಿಗುತ್ತವೆ. ನಾನು 50-100 ರೂಪಾಯಿ ಲಾಭ ಗಳಿಸುತ್ತೇನೆ. ಈ ಹಣದಲ್ಲಿ ನಾನು ನನ್ನ ಮನೆಯನ್ನು ನಡೆಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version