ಕಸಾಯಿಖಾನೆಗೆ ಅಕ್ರಮ ಸಾಗಾಟದ ವೇಳೆ ಪಿಕ್ ಅಪ್ ಪಲ್ಟಿ: ಹಸು ಸಾವು
ಚಾಮರಾಜನಗರ: ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕ್ ಅಪ್ ಪಲ್ಟಿಯಾಗಿ ಹಸು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಸಮೀಪ ನಡೆದಿದೆ.
ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದ್ದು ಹಸುವೊಂದು ಮೃತಪಟ್ಟಿದೆ, ಎರಡು ಎಮ್ಮೆ, ಎಂಟು ಹಸುಗಳು ಬದುಕುಳಿದಿವೆ. ಮೈಸೂರಿನಿಂದ ಕೇರಳಕ್ಕೆ ಅಕ್ರಮವಾಗಿ ರಾಸುಗಳು ಸಾಗಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದ್ದು ಘಟನೆ ನಡೆಯುತ್ತಿದ್ದಂತೆ ವಾಹನ ಚಾಲಕ ಪರಾರಿಯಾಗಿದ್ದಾನೆ.
ಬದುಕುಳಿದ ರಾಸುಗಳನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹಸು ಕಳ್ಳರ ಬಂಧನ: ಸೋಮವಾರ ಸಂಜೆ ಗುಂಡ್ಲುಪೇಟೆ ಪಟ್ಟಣದಲ್ಲಿ ಹಸುಗಳನ್ನು ಕದ್ದು ಕಸಾಯಿಖಾನೆಗೆ ಸಾಗಾಟ ಮಾಡುತಿದ್ದ ವೇಳೆ ಮೂವರನ್ನು ಬಂಧಿಸಿರುವ ಘಟನೆ ನಡೆದಿದೆ.
ತಮಿಳುನಾಡು ಮೂಲದ ಮುರುಗೇಷನ್, ಶಬರೀಷನ್ ಹಾಗೂ ಮಂಜುನಾಥ್ ಎಂಬವರು ಬಂಧಿತ ಆರೋಪಿಗಳು. ಗುಂಡ್ಲುಪೇಟೆ ಮನೆಯೊಂದರ ಮುಂದೆ ಕಟ್ಟಿದ್ದ ಎರಡು ಹಸುಗಳನ್ನು ಇವರುಗಳು ಕದ್ದು ಕಸಾಯಿಖಾನೆಗೆ ಸಾಗಾಟ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಸದ್ಯ, ಬಂಧಿತರಿಂದ ಎರಡು ಹಸು, ಗೂಡ್ಸ್ ವಾಹನ ವಶಪಡಿಸಿಕೊಂಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

























