ಮಗಳು ಸತ್ತೇ ಹೋಗಿದ್ದಾಳೆಂದು ಭಾವಿಸಿದ್ರು: ಅಂತ್ಯಸಂಸ್ಕಾರ ಮಾಡಿದ ತಂದೆಗೆ ಪುತ್ರಿಯೇ ಕಾಲ್‌ ಮಾಡಿ ‘ನಾನು ಬದುಕಿದ್ದೇನೆ’ ಅಂದಳು..!

22/08/2023

ಈ ಜಗತ್ತೇ ವ್ಯಕ್ತಿ ವಿಸ್ಮಯ. ಇಲ್ಲಿ ನಡೆಯಬೇಕಾದ್ದು ನಡೆಯುತ್ತದೆ. ನಡೆಯಬಾರದ್ದು ಕೂಡಾ ನಡೆಯುತ್ತದೆ. ಹೌದು. ಈಗ ನಾವಿಲ್ಲಿ ಹೇಳಹೊರಟಿರುವ ವಿಚಾರ ವಿಚಿತ್ರದಲ್ಲಿ ವಿಚಿತ್ರ. ಯೆಸ್. ಆ ತಂದೆ ಆಗಷ್ಟೇ ತನ್ನ ಮಗಳೇ ಮೃತಪಟ್ಟಿದ್ದಾಳೆಂದು ಭಾವಿಸಿ ಕಾಲುವೆಯಲ್ಲಿ ಸಿಕ್ಕಿದ ಮೃತದೇಹದ ಅಂತ್ಯಸಂಸ್ಕಾರ ಮಾಡಿ ಆಗಿತ್ತು.

ಅಷ್ಟರಲ್ಲೇ ಒಂದು ಕಾಲ್ ಬರಬೇಕಾ..? ಆ ಕರೆ ಆ ಅಪ್ಪನನ್ನು ಒಂದು ಕ್ಷಣ ದಂಗಾಗುವಂತೆ ಮಾಡಿದೆ. ಬಿಹಾರದ ಪುರ್ನಿಯಾದಲ್ಲಿ ಮೃತಪಟ್ಟ ಮಗಳ ಅಂತ್ಯಸಂಸ್ಕಾರ ಮುಗಿಸಿ ಬಂದ ತಂದೆಗೆ ಸ್ವತಃ ಮಗಳೇ ಕರೆ ಮಾಡಿ ‘ಅಪ್ಪ, ನಾನು ಇನ್ನೂ ಬದುಕಿದ್ದೇನೆʼ ಎಂದು ಹೇಳಿದ್ದಾರೆ. ಅಕ್ಬರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂಶು ಕುಮಾರಿ ಎಂಬ ಯುವತಿ ಕಳೆದ ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಮತ್ತು ಪೊಲೀಸರು ಎಲ್ಲ ಕಡೆ ಹುಡುಕಿದ್ದರೂ ಕಾಣೆಯಾಗಿದ್ದ ಯುವತಿಯ ಸುಳಿವೇ ಸಿಕ್ಕಿರಲಿಲ್ಲ.

ಈ ಮಧ್ಯೆ ಕೆಲ ದಿನಗಳ ಹಿಂದೆ ಕಾಲುವೆವೊಂದರಲ್ಲಿ ಕಾಣೆಯಾದ ಯುವತಿಯನ್ನೇ ಹೋಲುವ ಮೃತದೇಹ ಸಿಕ್ಕಿತ್ತು. ಮುಖವು ಗುರುತಿಸಲಾಗದಷ್ಟು ಉಬ್ಬಿಕೊಂಡಿತ್ತು. ವಸ್ತ್ರದ ಆಧಾರದ ಮೇಲೆ ಇದು ತಮ್ಮ ಮಗಳದ್ದೇ ದೇಹ ಎಂದು ಕುಟುಂಬಸ್ಥರು ಅದನ್ನು ಅಂತ್ಯಸಂಸ್ಕಾರ ಮಾಡಿದ್ದರು.

ಅಂತ್ಯಸಂಸ್ಕಾರದ ವೇಳೆ ನೊಂದು ಹೋಗಿದ್ದ ತಂದೆಯ ಫೋಟೋ ಸ್ಥಳೀಯರ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ಇದು ಬೇರೊಂದು ಊರಿನಲ್ಲಿದ್ದ ಅವರ ಮಗಳ ಗಮನಕ್ಕೂ ಬಂದಿದೆ.
ತನ್ನೆಲ್ಲಾ ಧೈರ್ಯವನ್ನು ಒಟ್ಟುಗೂಡಿಸಿ ಮಗಳು, ತಂದೆಗೆ ಕರೆ ಮಾಡಿದ್ದಾಳೆ. ತಾನಿನ್ನೂ ಬದುಕಿದ್ದೇನೆ. ಪ್ರೀತಿಸಿದ ಯುವಕನೊಂದಿಗೆ ತೆರಳಿ ವಿವಾಹವಾಗಿದ್ದೇನೆ ಎಂದು ತಿಳಿಸಿದ್ದಾಳೆ. ಮಗಳು ಬದುಕಿರುವ ವಿಷಯ ತಿಳಿದ ಕುಟುಂಬದ ಸಂಭ್ರಮಕ್ಕೆ ಪಾರೇ ಇರಲಿಲ್ಲ.

ಅತ್ತ ಅಂತ್ಯಸಂಸ್ಕಾರಕ್ಕೊಳಗಾದ ಯುವತಿಯ ಗುರುತು ಪತ್ತೆಗೆ ಇಳಿದ ಪೊಲೀಸರಿಗೆ ಮತ್ತೊಂದು ಶಾಕ್‌ ಎದುರಾಗಿದೆ. ಮರ್ಯಾದಾ ಹತ್ಯೆಯಿಂದ ಮೃತಪಟ್ಟ ಯುವತಿ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version