11:17 PM Saturday 23 - August 2025

ಫೋಟೋ ತೆಗೆದಿರಬಹುದು ಆದ್ರೆ ಚೈತ್ರಾ ಕುಂದಾಪುರ ಅವರ ವೈಯಕ್ತಿಕ ಸಂಪರ್ಕ ನನಗೆ ಇರಲಿಲ್ಲ : ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

shoba karadajje
15/09/2023

ಕುಂದಾಪುರ: ಚೈತ್ರ ಕುಂದಾಪುರ ಅರೆಸ್ಟ್ ಆಗಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ, ಚೈತ್ರಾ ಕುಂದಾಪುರ ಅವರ ವೈಯಕ್ತಿಕ ಸಂಪರ್ಕ ನನಗೆ ಇರಲಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.
ಚೈತ್ರಾ ಕುಂದಾಪುರ ಪ್ರಕರಣದ ಕುರಿತು ಉಡುಪಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನನಗೆ ಅವರ ವೈಯಕ್ತಿಕ ಪರಿಚಯ ಇರಲಿಲ್ಲ, ಕಾರ್ಯಕ್ರಮಗಳಲ್ಲಿ ಸಿಕ್ಕಾಗ ಫೋಟೋ ತೆಗೆದಿರಬಹುದು, ಗೊತ್ತಿಲ್ಲ ಎಂದು ಹೇಳಿದರು.

ರಾಜಕೀಯ ಸಾಮಾಜಿಕ ಜೀವನದಲ್ಲಿ ಯಾರೇ ತಪ್ಪು ಮಾಡಿದ್ರು ಶಿಕ್ಷೆ ಆಗಬೇಕು. ಪ್ರಕರಣದ ಕುರಿತು ತನಿಖೆ ಆಗುತ್ತಿದೆ ನಿಷ್ಪಕ್ಷವಾಗಿ ತನಿಖೆಯಾಗಲಿ, ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ ತಪ್ಪು ಮಾಡದೆ ಇದ್ದರೆ ಅನಾವಶ್ಯಕವಾಗಿ ತೊಂದರೆ ಕೊಡುವುದು ಬೇಡ ಎಂದು ರಾಜ್ಯ ಸರ್ಕಾರಕ್ಕೆ ಶೋಭಾ ಕರಂದ್ಲಾಜೆ ಮನವಿ ಮಾಡಿದರು.

ಪ್ರಕರಣದ ಬಗ್ಗೆ ಮಾಹಿತಿಗಳನ್ನು ಪೊಲೀಸರು ಸಂಗ್ರಹ ಮಾಡುತ್ತಿದ್ದಾರೆ. ಉನ್ನತ ಮಟ್ಟದ ತನಿಖೆಗೆ ನಾನು ಆಗ್ರಹಿಸುತ್ತೇನೆ, ನಾವು ಯಾರೂ ಕೂಡ ಚೈತ್ರಾಳ ಬೆಂಬಲಕ್ಕೆ ನಿಂತಿಲ್ಲ, ನಾವು ಯಾರು ಅವಳನ್ನು ರಕ್ಷಣೆ ಮಾಡುತ್ತಿಲ್ಲ, ಯಾರು ತಪ್ಪು ಮೋಸ ಮಾಡಿದ್ರು ಕೂಡ ಶಿಕ್ಷೆ ಆಗಲೇಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಚೈತ್ರ ಕುಂದಾಪುರ ಜೊತೆಗೆ ನನಗೆ ಯಾವುದೇ ರೀತಿಯ ನೇರ ಸಂಪರ್ಕ ಇರಲಿಲ್ಲ, ಕಾನೂನು ಮೂಲಕ ಕ್ರಮ ಕೈಗೊಂಡು ತನಿಖೆ ಆಗಬೇಕು. ಉಪ್ಪು ತಿಂದವರು ನೀರು ಕುಡಿಯುತ್ತಾರೆ ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ, ನನ್ನ ಜೊತೆ ನೂರಾರು ಮಂದಿ ಫೋಟೋ ತೆಗೆದುಕೊಳ್ಳುತ್ತಾರೆ. ಹಾಗೆ ಚೈತ್ರಾಳು ಫೋಟೋ ತೆಗೆದುಕೊಂಡಿರಬಹುದು. ನನಗೆ ಚೈತ್ರ ಫೋನ್ ಮಾಡ್ಲಿಲ್ಲ ನಾನು ಕೂಡ ಅವಳಿಗೆ ಫೋನ್ ಮಾಡಿದ್ದು ಇಲ್ಲ ಎಂದು ಅವರು ಹೇಳಿದರು.

ಇನ್ನೂ, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ನನಗೆ ಟಿಕೆಟ್ ಸಿಗುತ್ತದೆ ಅಂತ ಚೈತ್ರಾ ಕುಂದಾಪುರ ನೀಡುತ್ತಿದ್ದ ಹೇಳಿಕೆಯ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಿಗೆ ಟಿಕೆಟ್ ಕೊಡಬೇಕು ಎಲ್ಲಿ ಟಿಕೆಟ್ ಕೊಡಬೇಕು ಅನ್ನೋದು ವರಿಷ್ಠರು ತೀರ್ಮಾನ ಮಾಡುತ್ತಾರೆ. ಭಾರತೀಯ ಜನತಾ ಪಾರ್ಟಿಗೆ ಗಟ್ಟಿಮುಟ್ಟಾದ ನೇತೃತ್ವ ಇದೆ.

ನರೇಂದ್ರ ಮೋದಿ ಅಮಿತ್ ಶಾ ನಡ್ದ ಲೋಕಸಭೆಗೆ ಯಾರಿಗೆ ಟಿಕೆಟ್ ನೀಡಬೇಕು ಅಂತ ತೀರ್ಮಾನ ಮಾಡುತ್ತಾರೆ . ಸ್ಪರ್ಧೆ ಮಾಡುತ್ತೇನೆ ಇಲ್ಲಿ ಟಿಕೆಟ್ ಸಿಗುತ್ತದೆ ಅಂತ ಯಾರು ಹೇಳಿಕೊಂಡ್ರು ಅದಕ್ಕೆ ಬೆಲೆ ಇರುವುದಿಲ್ಲ. ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ ಎಲ್ಲಿ ಸ್ಪರ್ಧೆ ಮಾಡಬೇಕು ಅಂತ ಎಂದರು.
ಬಿಜೆಪಿಯ ರಾಜ್ಯ ಹಾಗೂ ಕೇಂದ್ರ ನಾಯಕರ ಹೆಸರನ್ನು ಚೈತ್ರ ದುರುಪಯೋಗ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡರೆ ಕ್ರಮ ಕೈಗೊಳ್ಳಬೇಕು. ಯಾರು ಯಾರು ಡೆಲ್ಲಿ ನಾಯಕರ, ರಾಜ್ಯನಾಯಕರ ಹೆಸರು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಲಿಂಕ್ ತನಿಖೆ ಆಗಬೇಕು, ಕುಮ್ಮಕ್ಕು ನೀಡಿದವರ ಬಗ್ಗೆಯೂ ತನಿಖೆ ನಡೆಯಲಿ ಎಂದರು.

ಭಾರತೀಯ ಜನತಾ ಪಾರ್ಟಿಯಲ್ಲಿ ದುಡ್ಡು ತೆಗೆದುಕೊಂಡು ಟಿಕೆಟ್ ನೀಡುವ ಸ್ಥಿತಿಯು ಇಲ್ಲ, ಮುಂದೆ ಬರುವುದೂ ಇಲ್ಲ, ಅಂತಹ ಪಾರ್ಟಿ ಕೂಡ ಭಾರತೀಯ ಜನತಾ ಪಾರ್ಟಿಯಲ್ಲ ಎಂದು ಅವರು ತಿಳಿಸಿದರು.

ಇತ್ತೀಚಿನ ಸುದ್ದಿ

Exit mobile version