ದರೋಡೆ ಪ್ರಕರಣ ಬೇಧಿಸಿದ ಪೊಲೀಸರು: 10 ಮಂದಿ ಅರೆಸ್ಟ್

chamarajanagara
14/10/2023

ಚಾಮರಾಜನಗರ: ಊಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಗುಂಡ್ಲುಪೇಟೆ ತಾಲೂಕಿನ ಬೆಂಡಗಳ್ಳಿ ಗೇಟ್ ಬಳಿ ಮಧ್ಯರಾತ್ರಿ ನಡೆದಿದ್ದ ದರೋಡೆ ಪ್ರಕರಣವನ್ನು ಬೇಧಿಸಿದ್ದು 10 ಮಂದಿ ಬಂಧಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ತಿಳಿಸಿದ್ದಾರೆ.

ಚಾಮರಾಜನಗರದಲ್ಲಿ ಈ ಸಂಬಂಧ ಪತ್ರಿಕಾ ಪ್ರಕಟಣೆ ಮೂಲಕ ಎಸ್ಪಿ ಮಾಹಿತಿ ನೀಡಿದ್ದು, ಈಚರ್ ವಾಹನ, ಕಾರುಗಳನ್ನು ಬಳಸಿಕೊಂಡು ಉದ್ಯಮಿ ಕಾರು  ಅಡ್ಡಗಟ್ಟಿ 40 ಲಕ್ಷ ನಗದು, ಮೊಬೈಲ್ ಹಾಗೂ ಆ್ಯಪಲ್ ವಾಚ್ ನ್ನು ದರೋಡೆ ಮಾಡಿದ್ದ ಪ್ರಕರಣ ಸಂಬಂಧ ಗುಂಡ್ಲುಪೇಟೆ ವೃತ್ತ ನಿರಿಕ್ಷಕರ ನೇತೃತ್ವದಲ್ಲಿ ಚಾಮರಾಜನಗರ ಪೂರ್ವ ಠಾಣೆ ಪಿಐ, ಬೇಗೂರು ಹಾಗೂ ತೆರಕಣಾಂಬಿ ಠಾಣೆಯ ಪಿಎಸ್ ಐ ಅವರನ್ನೊಳಗೊಂಡ ತಂಡ ಪ್ರಕರಣ ಬೇಧಿಸಿ 10 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಂಧಿತ ಆರೋಪಿಗಳಿಂದ ದರೋಡೆ ಮಾಡಿದ್ದ ಹಣದಲ್ಲಿ 20.91 ಲಕ್ಷ ನಗದು, 1 ಕಾರು, ಆ್ಯಪಲ್ ವಾಚ್ , ಕೃತ್ಯಕ್ಕೆ ಬಳಸಿದ್ದ 3 ಕಾರು ವಶಪಡಿಸಿಕೊಳ್ಳಲಾಗಿದೆ, ಪ್ರಮುಖ ಆರೋಪಿಗಳು ಪತ್ತೆಯಾಗಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದ 29 ರ ರಾತ್ರಿ ಗುಂಡ್ಲುಪೇಟೆ ತಾಲೂಕಿನ ಬೆಂಡಗಳ್ಳಿ ಗೇಟ್ ಬಳಿ ಕೇರಳ ಮೂಲದ ಉದ್ಯಮಿ ರಹೀಂ ಎಂಬವರು 40 ಲಕ್ಷ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾಗ 10 ಕ್ಕೂ ಹೆಚ್ಚು ಜನರ ಗುಂಪು ದರೋಡೆ ಮಾಡಿದ್ದರು. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಇತ್ತೀಚಿನ ಸುದ್ದಿ

Exit mobile version