ಪಾದ್ರಿ ಸಾವು: ಸಾವಿನ ಬಗ್ಗೆ ಪ್ರವಚನ ನೀಡುವಾಗಲೇ ತಲೆಗೆ ಬಿತ್ತು ಶಿಲುಬೆ!
ಇಕ್ವೆಡಾರ್ ನಲ್ಲಿ ನಡೆದ ಅತ್ಯಂತ ಆಘಾತಕಾರಿ ಮತ್ತು ಅಚ್ಚರಿಯ ಘಟನೆಯೊಂದರಲ್ಲಿ, ಕ್ಯಾಥೋಲಿಕ್ ಪಾದ್ರಿಯೊಬ್ಬರು ಲೈವ್ ಪ್ರಸಾರವಾಗುತ್ತಿದ್ದ ಪ್ರಾರ್ಥನಾ ಸಭೆಯ (Mass) ವೇಳೆ ತಮ್ಮ ಹಿಂದೆ ಗೋಡೆಗೆ ನೇತುಹಾಕಿದ್ದ ದೊಡ್ಡ ಶಿಲುಬೆ (Crucifix) ತಲೆಗೆ ಬಿದ್ದು ಸಾವನ್ನಪ್ಪಿದ್ದಾರೆ. ವಿಶೇಷವೆಂದರೆ, ಈ ದುರ್ಘಟನೆ ಸಂಭವಿಸುವುದಕ್ಕೆ ಕೆಲವೇ ನಿಮಿಷಗಳ ಮೊದಲು ಅವರು ಜೀವನದ ನಶ್ವರತೆ ಮತ್ತು ಸಾವಿನ ಕುರಿತು ಪ್ರವಚನ ನೀಡಿದ್ದರು.
ಮೃತರನ್ನು ಇಕ್ವೆಡಾರ್ನ ಗುವಾಲುಕಿಲ್ನಲ್ಲಿರುವ ‘ಅವರ್ ಲೇಡಿ ಆಫ್ ಪರ್ಪೆಚ್ಯುಯಲ್ ಹೆಲ್ಪ್’ ಚರ್ಚ್ನ ಪಾದ್ರಿ ಫಾಧರ್ ಪ್ಯಾಟ್ರಿಸಿಯೊ ಆಲ್ಫ್ರೆಡೊ ಸಾಂಚೆಜ್ ಮೊಲಿನಾರಿ (Father Patricio Alfredo Sanchez Molinari) ಎಂದು ಗುರುತಿಸಲಾಗಿದೆ. ಈ ದಾರುಣ ಸುದ್ದಿಯನ್ನು ಗುವಾಲುಕಿಲ್ ಆರ್ಚ್ಡಯಸೀಸ್ ಅಧಿಕೃತವಾಗಿ ಖಚಿತಪಡಿಸಿದೆ.
ಘಟನೆಗೆ ಕೆಲವೇ ಕ್ಷಣಗಳ ಮುಂಚೆ ಫಾಧರ್ ಮೊಲಿನಾರಿ ಅವರು ಜೀವನದ ಅಲ್ಪಾಯುಷ್ಯ ಮತ್ತು ಸಾವಿನ ಸತ್ಯತೆಯ ಬಗ್ಗೆ ಭಕ್ತರಿಗೆ ಬೋಧನೆ ಮಾಡುತ್ತಿದ್ದರು. “ಒಂದು ದಿನ ನಮ್ಮೆಲ್ಲರ ಸಾವು ಖಂಡಿತ ಸಂಭವಿಸುತ್ತದೆ. ಫೋನ್ ಗಳಲ್ಲಿ ಕಾಲಹರಣ ಮಾಡುವ ಬದಲು, ದೇವರಿಗಾಗಿ ಮತ್ತು ನಮ್ಮ ಪ್ರೀತಿಪಾತ್ರರಿಗಾಗಿ ಹೆಚ್ಚು ಸಮಯವನ್ನು ಮೀಸಲಿಡಿ” ಎಂದು ಅವರು ಭಕ್ತರಿಗೆ ಕರೆ ನೀಡಿದ್ದರು.
ನಂತರ ಅವರು ಮತ್ತೊಂದು ಪ್ರಾರ್ಥನೆಯನ್ನು ಆರಂಭಿಸುತ್ತಿದ್ದಂತೆ, ಅವರ ಹಿಂದೆ ಗೋಡೆಗೆ ಅಳವಡಿಸಲಾಗಿದ್ದ ಭಾರೀ ಗಾತ್ರದ ಶಿಲುಬೆ ಹಠಾತ್ತನೆ ಕಳಚಿ ಅವರ ತಲೆಯ ಹಿಂಭಾಗಕ್ಕೆ ಬಿತ್ತು.
ಈ ಸಂಪೂರ್ಣ ದೃಶ್ಯವು ಚರ್ಚ್ನ ಲೈವ್ ಪ್ರಸಾರದಲ್ಲಿ (Livestream) ಸೆರೆಯಾಗಿದೆ. ಶಿಲುಬೆ ಅಪ್ಪಳಿಸಿದ ತಕ್ಷಣ ಪಾದ್ರಿ ನೆಲಕ್ಕೆ ಕುಸಿದುಬಿದ್ದರು. ಇದನ್ನು ಕಂಡು ಆತಂಕಗೊಂಡ ಭಕ್ತರು ಜೋರಾಗಿ ಅಳುತ್ತಾ ಮತ್ತು ಕಿರುಚುತ್ತಾ ಸಹಾಯಕ್ಕೆ ಧಾವಿಸಿದರು. ತಕ್ಷಣವೇ ಆಂಬುಲೆನ್ಸ್ಗೆ ಕರೆ ಮಾಡಲಾಗಿದ್ದರೂ, ಅಷ್ಟರಲ್ಲಾಗಲೇ ಪಾದ್ರಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ತೂಕದ ಶಿಲುಬೆ ಗೋಡೆಯಿಂದ ಹಠಾತ್ತನೆ ಕಳಚಿಬೀಳಲು ನಿಖರವಾದ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಚರ್ಚ್ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತ ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

























