ಡಿ.28ರಂದು ನಾಗ್ಪುರದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ: ಪ್ರಮುಖ ಭಾಷಣ ಮಾಡಲಿದ್ದಾರೆ ರಾಹುಲ್ ಗಾಂಧಿ, ಖರ್ಗೆ

16/12/2023
- ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಡಿಸೆಂಬರ್ 28 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಶುಕ್ರವಾರ ರ್ಯಾಲಿಯನ್ನು ಘೋಷಿಸಿದ್ದಾರೆ. ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಅವರು ನಾಗ್ಪುರದಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರೊಂದಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಭೆಯಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, ಮಾಜಿ ರಾಜ್ಯ ಸಚಿವ ಬಾಳಾಸಾಹೇಬ್ ಥೋರತ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್, ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಚವಾಣ್ ಮತ್ತು ಪೃಥ್ವಿರಾಜ್ ಚವಾಣ್, ಹಿರಿಯ ನಾಯಕ ಮುಕುಲ್ ವಾಸ್ನಿಕ್ ಮತ್ತಿತರರು ಭಾಗವಹಿಸಿದ್ದರು.
ನಾಗ್ಪುರದಲ್ಲಿ ನಡೆದ ಸಭೆಯಲ್ಲಿ ಲೋಕಸಭೆಯ ಇತ್ತೀಚಿನ ಭದ್ರತಾ ಉಲ್ಲಂಘನೆ ಮತ್ತು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ 14 ಸಂಸದರನ್ನು ಅಮಾನತುಗೊಳಿಸಿರುವ ಬಗ್ಗೆ ಚರ್ಚಿಸಲಾಯಿತು.
ಸಭೆಯ ನಂತರ ಮಾತನಾಡಿದ ವೇಣುಗೋಪಾಲ್, “ಈ ರ್ಯಾಲಿಯ ಮೂಲಕ ಕಾಂಗ್ರೆಸ್ ಭಾರತದ ಪ್ರಗತಿಗೆ ಹೊಸ ಮಾರ್ಗವನ್ನು ನೀಡುತ್ತದೆ ಎಂಬ ಬಲವಾದ ಸಂದೇಶವನ್ನು ನಾವು ಪ್ರತಿಯೊಬ್ಬ ಭಾರತೀಯರಿಗೂ ಕಳುಹಿಸುತ್ತೇವೆ” ಎಂದರು.