1:52 AM Wednesday 17 - September 2025

ತಮಿಳುನಾಡಿನಲ್ಲಿ ಮಳೆಗೆ ನಾಲ್ವರು ಬಲಿ: ಜನಜೀವನ ಅಸ್ತವ್ಯಸ್ತ

rain
21/05/2024

ಚೆನ್ನೈ: ತಮಿಳುನಾಡಿನಲ್ಲಿ ಭಾರೀ ಮಳೆಯ ಪರಿಣಾಮ ಸಾವಿಗೀಡಾದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತೂತುಕುಡಿ ಮತ್ತು ಸೇಲಂ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ.

ಈ ಹಿಂದೆ ತೆಂಕಶಿ ಜಿಲ್ಲೆಯ ಕುಟ್ರಾಲಂ ಜಲಪಾತದಲ್ಲಿ 17 ವರ್ಷದ ಬಾಲಕನೊಬ್ಬ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ. ಮಧುರೈನಲ್ಲಿ ಛಾವಣಿ ಕುಸಿದು ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದ. ಇದುವರೆಗೆ 7 ಗುಡಿಸಲುಗಳು ಹಾಗೂ 14 ಜಾನುವಾರುಗಳಿಗೆ ಹಾನಿಯಾಗಿದೆ.

ದಕ್ಷಿಣ, ಪಶ್ಚಿಮ ಮತ್ತು ಡೆಲ್ಟಾ ಪ್ರದೇಶಗಳಲ್ಲಿನ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ರಾಮನಾಥಪುರಂ ಜಿಲ್ಲೆಯ ಕಮುದಿಯಲ್ಲಿ 12.44 ಸೆಂ.ಮೀ ಮಳೆಯಾಗಿದ್ದರೆ, ಮಧುರೈನ ತಲ್ಲಕುಲಂನಲ್ಲಿ 10.8 ಸೆಂ.ಮೀ, ತಿರುಚ್ಚಿಯ ಪುಲ್ಲಂಬಾಡಿಯಲ್ಲಿ 9.8 ಸೆಂ.ಮೀ ಮಳೆಯಾಗಿದೆ.

ಕನ್ಯಾಕುಮಾರಿ, ಥೇಣಿ, ತಿರುನಲ್ವೇಲಿ ಮತ್ತು ತೆಂಕಶಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು, ವಿರುದುನಗರ, ತಿರುಪ್ಪೂರ್, ಕೊಯಮತ್ತೂರು, ನೀಲಗಿರಿ ಮತ್ತು ದಿಂಡಿಗಲ್‌ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ ಮೂರು ದಿನಗಳ ಕಾಲ ತಮಿಳುನಾಡಿನ ದಕ್ಷಿಣ, ಪಶ್ಚಿಮ ಮತ್ತು ಡೆಲ್ಟಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ತಮಿಳುನಾಡು ಸರ್ಕಾರವು ಕನ್ಯಾಕುಮಾರಿ, ಕೊಯಮತ್ತೂರು ಮತ್ತು ನೀಲಗಿರಿ ಜಿಲ್ಲೆಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯನ್ನು ನಿಯೋಜಿಸಿದೆ.

ಗಂಟೆಗೆ 40 ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಮೀನುಗಾರರು ಇನ್ನೂ 5 ದಿನಗಳ ಕಾಲ ಸಮುದ್ರದಿಂದ ದೂರ ಉಳಿಯುವಂತೆ ಸೂಚಿಸಲಾಗಿದೆ. ಮೇ 22ರಂದು ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಉಂಟಾಗಲಿದ್ದು, 24ರಂದು ಅದು ವಾಯುಭಾರ ಕುಸಿತವಾಗಿ ಬದಲಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 23ರೊಳಗೆ ಮರಳಿ ಬರುವಂತೆ ಆಳಸಮುದ್ರದ ಮೀನುಗಾರರಿಗೆ ಹವಾಮಾನ ಇಲಾಖೆ ಸೂಚಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ

Exit mobile version