ಸಾಂತ್ವನ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ಹತ್ಯೆಗೀಡಾದ ನಾಗರಿಕರ ಕುಟುಂಬಗಳನ್ನು ಭೇಟಿ ಮಾಡಿದ ರಾಜನಾಥ್ ಸಿಂಗ್

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪೂಂಚ್ ಜಿಲ್ಲೆಯಲ್ಲಿ ಕೊಲ್ಲಲ್ಪಟ್ಟ ನಾಗರಿಕರ ಕುಟುಂಬಗಳನ್ನು ಭೇಟಿಯಾದರು. ಡಿಸೆಂಬರ್ 22 ರಂದು ಮೂವರು ನಾಗರಿಕರು ನಿಗೂಢವಾಗಿ ಸಾವನ್ನಪ್ಪಿದ್ದರು. ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ಭಯೋತ್ಪಾದಕರು ನಡೆಸಿದ ಮಾರಣಾಂತಿಕ ದಾಳಿಯಲ್ಲಿ ನಾಲ್ವರು ಸೇನಾ ಜವಾನರು ಸಾವನ್ನಪ್ಪಿದ ಒಂದು ದಿನದ ನಂತರ ಈ ಘಟನೆ ನಡೆದಿತ್ತು.
ಈ ನಾಗರಿಕ ಸಾವುಗಳ ಬಗ್ಗೆ ಸೇನೆಯು ತನಿಖೆಯನ್ನು ಪ್ರಾರಂಭಿಸಿದೆ. ಸೇನಾ ಮುಖ್ಯಸ್ಥ (ಸಿಒಎಎಸ್) ಜನರಲ್ ಮನೋಜ್ ಪಾಂಡೆ ಅವರು ಪೂಂಚ್ ಗೆ ಭೇಟಿ ನೀಡಿ ಈ ಪ್ರದೇಶದ ನೆಲದ ಪರಿಸ್ಥಿತಿಯನ್ನು ಪರಿಶೀಲಿಸಿದರು. ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪೂಂಚ್ ನಲ್ಲಿ ಮೃತಪಟ್ಟ ಮೂವರು ನಾಗರಿಕರ ಕುಟುಂಬ ಸದಸ್ಯರನ್ನು ಹಾಗೂ ಗಾಯಾಳುಗಳನ್ನು ಭೇಟಿಯಾದರು.
ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ರಾಜನಾಥ್ ಸಿಂಗ್ ರಾಜೌರಿ ಜಿಲ್ಲೆಗೆ ಆಗಮಿಸಿದರು. ಗಾಯಗೊಂಡ ನಾಗರಿಕರ ಆರೋಗ್ಯದ ಬಗ್ಗೆ ವಿಚಾರಿಸಲು ಅವರು ಸರ್ಕಾರಿ ವೈದ್ಯಕೀಯ ಕಾಲೇಜಿಗೆ (ಜಿಎಂಸಿ) ಭೇಟಿ ನೀಡಿದರು.
“ರಕ್ಷಣಾ ಸಚಿವರು ನಾಗರಿಕರ ಕುಟುಂಬಗಳನ್ನು ಭೇಟಿಯಾದರು ಮತ್ತು ಘಟನೆಯ ಬಗ್ಗೆ ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು” ಎಂದು ಡಾಕ್ ಬಂಗಲೆಯಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ಮಾಜಿ ಎಂಎಲ್ಸಿ ಶಹನಾಜ್ ಗನೈ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.