ಕೆಂಪು ಕಲ್ಲು ಕ್ವಾರೆ ಉದ್ಯಮ: ಪರಿಶಿಷ್ಟ ಜಾತಿಯ ಉದ್ಯಮಿಗಳ ನೆರವಿಗೆ ಧಾವಿಸಲು ಗೃಹ ಸಚಿವರಿಗೆ ಮನವಿ

ಮಂಗಳೂರು(Mahanayaka): ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷರ ನೇತೃತ್ವದ ನಿಯೋಗವು ಕರ್ನಾಟಕ ಸರ್ಕಾರದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರನ್ನು ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಭೇಟಿ ಮಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯವರು ಕೆಂಪು ಕಲ್ಲು ಕ್ವಾರೆಯ ಉದ್ಯಮದಲ್ಲಿ ನಡೆಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು.
ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷರಾದ ದಿನೇಶ್ ಮೂಳೂರು ಗೃಹ ಸಚಿವರೊಂದಿಗೆ ಮಾತನಾಡುತ್ತಾ, ಜಿಲ್ಲೆಯಲ್ಲಿ ಕೆಂಪು ಕಲ್ಲು ಕ್ವಾರೆ ನಡೆಸುವಲ್ಲಿ ಪರಿಶಿಷ್ಟ ಜಾತಿಯವರಿಗೆ 75 ಶೇಕಡ ಕಡಿಮೆ ದರದಲ್ಲಿ ಲೀಸ್ ಪರವಾನಿಗೆ ನೀಡುವಂತೆ ಮೀಸಲಾತಿ ಕಲ್ಪಿಸಲು ಬೇಡಿಕೆಯಿಟ್ಟರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಕ್ವಾರೆ ಉದ್ಯಮವು ವ್ಯಾಪಕವಾಗಿದ್ದು, ಈ ಉದ್ದಿಮೆಯಲ್ಲಿ ಎಲ್ಲಾ ವರ್ಗದ ಉದ್ದಿಮೆದಾರರಿಗೆ ಲೀಸ್ ಪರವಾನಿಗೆ ಮೊತ್ತವು ಏಕ ರೂಪದಲ್ಲಿ ಅನ್ವಯಿಸುತ್ತದೆ. ಆದರೆ ಜಿಲ್ಲೆಯಲ್ಲಿ ಬಂಡವಾಳಶಾಹಿಗಳು ಕಲ್ಲಿನ ಕ್ವಾರೆಯ ಉದ್ದಿಮೆಯನ್ನು ಯಥೇಚ್ಚವಾಗಿ ನಡೆಸುತ್ತಿದ್ದು, ಈ ಸ್ಪರ್ಧಾತ್ಮಕ ಉದ್ದಿಮೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಕಲ್ಲಿನ ಕ್ವಾರೆಯ ಉದ್ಯಮ ನಡೆಸಲು ಅಸಾಧ್ಯವಾಗಿರುತ್ತದೆ. ಆದರೂ ಇಲ್ಲಿ ಪರಿಶಿಷ್ಟ ಜಾತಿಯ ಕೆಲವೇ ಕೆಲವು ಉದ್ದಿಮೆದಾರರು ಕಷ್ಟಪಟ್ಟು ಉದ್ದಿಮೆಯನ್ನು ನಡೆಸುತ್ತಿದ್ದಾರೆ, ಆದರೆ ಈಗಿನ ಕಾನೂನು ವ್ಯವಸ್ಥೆಯ ಪ್ರಕಾರ ಈ ಉದ್ದಿಮೆಯನ್ನು ಮಾಡಲು ಅವರಿಗೆ ಅಸಾಧ್ಯವಾಗಿದೆ. ಆದ್ದರಿಂದ ಪರಿಶಿಷ್ಟ ಜಾತಿಯವರಿಗೆ ಉದ್ಯಮ ನಡೆಸಲು ಅನುಕೂಲವಾಗುವಂತೆ 75 ಶೇಕಡ ಕಡಿಮೆ ದರದಲ್ಲಿ ಲೀಸ್ ಪರವಾನಗಿ ನೀಡುವಂತೆ ಗೃಹ ಸಚಿವರಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪರಿಶಿಷ್ಟ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮ್ ಬಳ್ಳಾಲ್ ಬಾಗ್, ಗಣೇಶ್ ಪ್ರಸಾದ್ ಮೂಡುಬಿದಿರೆ, ಜಿಲ್ಲಾ ಕಾರ್ಯದರ್ಶಿ ಸುನೀಲ್ ಅದ್ಯಪಾಡಿ, ರವಿ ಸುಂಕದಕಟ್ಟೆ ಹಾಗೂ ಅಪ್ಪಿ, ಕಮಲಾಕ್ಷ ಬಜಾಲ್ , ಭರತ್ ಬಳ್ಳಾಲ್ ಬಾಗ್ , ಗಗನ್ ಮತ್ತಿತರರು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD