ರೇಣುಕಾಸ್ವಾಮಿ ಕೊಲೆ ಕೇಸ್‌: ನಟರಾದ ಚಿಕ್ಕಣ್ಣ, ಯಶಸ್ ಸೂರ್ಯಗೆ ಕೋರ್ಟ್ ಸಮನ್ಸ್

chikkanna yashas surya
08/10/2026

ಬೆಂಗಳೂರು: ಬಹುಚರ್ಚಿತ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 59ನೇ ಸಿಎಸ್‌ ಎಚ್‌ (CCH) ನ್ಯಾಯಾಲಯವು ಕನ್ನಡ ಚಿತ್ರರಂಗದ ಇಬ್ಬರು ನಟರಾದ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಕೊಲೆ ಪ್ರಕರಣದ ತನಿಖೆ ಮತ್ತು ವಿಚಾರಣೆಯ ಪ್ರಮುಖ ಭಾಗವಾಗಿ, ನಟ ಚಿಕ್ಕಣ್ಣ ಅವರಿಗೆ CW–80 ಹಾಗೂ ನಟ ಯಶಸ್ ಸೂರ್ಯ ಅವರಿಗೆ CW–98 ಎಂದು ನಂಬರ್ ನೀಡಿ ಸಮನ್ಸ್ ಜಾರಿಗೊಳಿಸಲಾಗಿದೆ. ಈ ಇಬ್ಬರೂ ನಟರು ಮುಂಬರುವ ಅಕ್ಟೋಬರ್ 15ರಂದು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವಂತೆ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ರೇಣುಕಾಸ್ವಾಮಿ ಹತ್ಯೆ ನಡೆದ ದಿನವಾದ ಜೂನ್ 8, 2024ರಂದು ನಟ ದರ್ಶನ್ ಅವರು ರಾಜರಾಜೇಶ್ವರಿ ನಗರದ ಸ್ಟೋನಿಬ್ರೂಕ್ (Stony Brook) ರೆಸ್ಟೋರೆಂಟ್‌ ನಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ.

ಹತ್ಯೆಗೂ ಮುನ್ನ ನಟ ದರ್ಶನ್ ಎಲ್ಲಿದ್ದರು, ಯಾರೊಂದಿಗೆ ಇದ್ದರು ಮತ್ತು ಆ ಸಂದರ್ಭದಲ್ಲಿ ಅವರ ಚಟುವಟಿಕೆಗಳು ಹೇಗಿದ್ದವು ಎಂಬುದನ್ನು ಸಾಬೀತುಪಡಿಸಲು ತನಿಖಾಧಿಕಾರಿಗಳು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಚಿಕ್ಕಣ್ಣ ಅವರನ್ನು ಪ್ರಮುಖ ಸಾಕ್ಷಿಯಾಗಿ ಉಲ್ಲೇಖಿಸಲಾಗಿದೆ.

ಪೊಲೀಸರ ತನಿಖೆಯ ವೇಳೆ ಚಿಕ್ಕಣ್ಣ ಅವರು ಮಹತ್ವದ ಮಾಹಿತಿ ನೀಡಿದ್ದು, ಬಳಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಸಿಆರ್‌ ಪಿಸಿ (CrPC) ಸೆಕ್ಷನ್ 164ರ ಅಡಿಯಲ್ಲಿ ತಮ್ಮ ಅಧಿಕೃತ ಹೇಳಿಕೆಯನ್ನು ಕೂಡ ದಾಖಲಿಸಿದ್ದರು.

ಇದೀಗ ಪ್ರಕರಣದ ವಿಚಾರಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದಲ್ಲಿ ಸಾಕ್ಷ್ಯ ಹಾಗೂ ಮೌಖಿಕ ವಿವರಗಳನ್ನು ದಾಖಲಿಸುವ ಸಲುವಾಗಿ ನ್ಯಾಯಾಲಯವು ಈ ಸಮನ್ಸ್ ಜಾರಿ ಮಾಡಿದೆ.

ಈ ಬಹುಚರ್ಚಿತ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ಕಾರಣ, ಸಾಕ್ಷಿಗಳಾದ ಈ ನಟರ ವಿಚಾರಣೆ ಮತ್ತು ನ್ಯಾಯಾಲಯದ ಮುಂದೆ ನೀಡಲಿರುವ ಹೇಳಿಕೆಗಳು ಚಿತ್ರರಂಗ ಹಾಗೂ ಕಾನೂನು ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿವೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler
Exit mobile version