ಮೂರು ದಿನಗಳಿಂದ ಅನ್ನ ಆಹಾರವಿಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ
ಉಡುಪಿ: ಮೂರು ದಿನಗಳಿಂದ ಅನ್ನ ಆಹಾರವಿಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಮಹಿಳೆಯನ್ನು ಶನಿವಾರ ಇಂದ್ರಾಳಿಯ ರೈಲ್ವೆ ಬ್ರಿಡ್ಜಿನ ಸನಿಹ, ಮಹಿಳಾ ಸಹಾಯವಾಣಿಯ ಕಾರ್ಯಕರ್ತರು, ಹಾಗೂ ನಾಗರಿಕ ಸಮಿತಿಯ ಕಾರ್ಯಕರ್ತ ನಿತ್ಯಾನಂದ ಒಳಕಾಡುವರು ಕಾರ್ಯಚರಣೆ ನಡೆಸಿ ರಕ್ಷಿಸಿರುವ ಘಟನೆ ಶನಿವಾರ ನಡೆದಿದೆ. ವಿಷಜಂತುಗಳು ಆಶ್ರಯ ಪಡೆದಿರುವ ಗಿಡ ಗಂಟಿಗಳ ಪೊದೆಯ ಸನಿಹ ಅರೆನಗ್ನ ಸ್ಥಿತಿಯಲ್ಲಿ ಮಹಿಳೆ ಕಂಡುಬಂದಿದ್ದರು. ಮಹಿಳೆ ಮುಂಬೈ ಥಾಣೆ ಮೂಲದ ಬೇಗಂ ಎಂದು ತಿಳಿದುಬಂದಿದೆ.
ರಕ್ಷಿಸಲ್ಪಟ್ಟ ಮಹಿಳೆಗೆ ಪುರ್ನವಸತಿ ಕಲ್ಪಿಸಲು ನಿಟ್ಟೂರಿನ ಸಖಿ ಒನ್ ಸ್ಟಾಪ್ ಸೆಂಟರಿಗೆ ದಾಖಲಿಸಲು ಪ್ರಯತ್ನಿಸಲಾಯಿತು. ಮಹಿಳೆ ಮಾನಸಿಕ ಅಸ್ವಸ್ಥೆಯಾದರಿಂದ ದಾಖಲಾತಿಗೆ ಅಡ್ಡಿಯಾಯಿತು. ಬಳಿಕ ಸಾಂತ್ವನ ಕೇಂದ್ರದ ಸಹಕಾರದೊಂದಿಗೆ ಚಿಕಿತ್ಸೆಗಾಗಿ ದೊಡ್ಡಣಗುಡ್ಡೆಯ ಡಾ. ಎ.ವಿ. ಬಾಳಿಗಾ ಆಸ್ಪತ್ರೆ ದಾಖಲಿಸಲಾಯಿತು.
ರಕ್ಷಣಾ ಕಾರ್ಯಾಚರಣೆಯಲ್ಲಿ ಮಹಿಳಾ ಸಹಾಯವಾಣಿ ಕೇಂದ್ರದ ಸಮಾಲೋಚಕರಾದ ಪೂರ್ಣಿಮಾ, ಸಾಮಾಜಿಕ ಕಾರ್ಯಕರ್ತೆ ಸುಮತಿ, 112 ಗಸ್ತು ಪೊಲೀಸ್ ಅಧಿಕಾರಿ, ನಿಖಿತಾ ನರ್ಸಿಂಗ್ ವಿದ್ಯಾರ್ಥಿ, ಅಶ್ವಿತ ಎಲ್. ಎಲ್. ಬಿ ವಿದ್ಯಾರ್ಥಿ ಭಾಗಿಯಾಗಿದ್ದರು. ಹಾಗೂ ಮೀನ ಸಹಕರಿಸಿದರು.

























