ಸಂಜಯ್ ಸಿಂಗ್ ಬಂಧನ ಮೋದಿ ಸರ್ಕಾರದ ಹತಾಶೆಯನ್ನು ತೋರಿಸುತ್ತದೆ: ಅರವಿಂದ್ ಕೇಜ್ರಿವಾಲ್ ಕಿಡಿ

04/10/2023
ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದು ಸಂಪೂರ್ಣವಾಗಿ ಕಾನೂನುಬಾಹಿರ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ. ಸಂಜಯ್ ಸಿಂಗ್ ಬಂಧನ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಇದು ಮೋದಿಜಿ ಅವರ ಹತಾಶೆಯನ್ನು ತೋರಿಸುತ್ತದೆ. ಚುನಾವಣೆಯವರೆಗೆ ಅವರು ಇನ್ನೂ ಅನೇಕ ವಿರೋಧ ಪಕ್ಷದ ನಾಯಕರನ್ನು ಬಂಧಿಸುತ್ತಾರೆ ಎಂದು ಕೇಜ್ರಿವಾಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಂಸದ ಸಂಜಯ್ ಸಿಂಗ್ ಅವರನ್ನು ಅವರ ದೆಹಲಿ ನಿವಾಸದಲ್ಲಿ ಇಡಿ ಅಧಿಕಾರಿಗಳು ಒಂದು ದಿನದ ವಿಚಾರಣೆಯ ನಂತರ ವಶಕ್ಕೆ ತೆಗೆದುಕೊಂಡರು. ನಂತರ ಅವರನ್ನು ಇಡಿ ಕಚೇರಿಗೆ ಕರೆತರಲಾಯಿತು.
ಸಂಜಯ್ ಸಿಂಗ್ ಅವರ ಪಕ್ಷದ ಸಹೋದ್ಯೋಗಿ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಬಂಧಿಸಿ ಜೈಲಿನಲ್ಲಿಡಲಾಗಿದೆ. ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಸಿಸೋಡಿಯಾ ಅವರನ್ನು ಫೆಬ್ರವರಿ 26 ರಂದು ಸಿಬಿಐ ಬಂಧಿಸಿತ್ತು.