11:17 PM Thursday 6 - November 2025

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ: ಗ್ರಾಮ ಕರಣಿಕನಿಗೆ ಮೂರು ವರ್ಷ ಜೈಲು ಶಿಕ್ಷೆ

judgement
13/10/2023

ಉಡುಪಿ: ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ವರ್ಷಗಳ ಹಿಂದೆ ನಡೆದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಗ್ರಾಮ ಕರಣಿಕರೊಬ್ಬರಿಗೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ಗುರುವಾರ ಆದೇಶ ನೀಡಿದೆ.

2018ರಲ್ಲಿ ಹೆಜಮಾಡಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಮಾರಸ್ವಾಮಿ ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಆರೋಪಿ. 17 ವರ್ಷದ ಪ್ರಾಯದ ನೊಂದ ಬಾಲಕಿ ತನ್ನ ಚಿಕ್ಕಮ್ಮಳೊಂದಿಗೆ ತನ್ನ ಅಕ್ಕನ ಜಾಗದ ತಕರಾರಿಗೆ ಸಂಬಂಧಿಸಿದಂತೆ ದಾಖಲೆಗಳ ಬಗ್ಗೆ ವಿಚಾರಿಸಲು ಹೆಜಮಾಡಿ ಗ್ರಾ.ಪಂ.ಕಚೇರಿಗೆ ಹೋಗಿದ್ದು, ಈ ವೇಳೆ ಆರೋಪಿಯು ನೊಂದ ಬಾಲಕಿ ಮತ್ತು ಆಕೆಯ ಚಿಕ್ಕಮ್ಮನನ್ನು ವಾಪಾಸು ಕಳುಹಿಸಿ ಅವರನ್ನು ಹಿಂಬಾಲಿಸಿಕೊಂಡು ಬಂದು ಬಸ್‌ ನಿಲ್ದಾಣದ ಬಳಿ ನಿಮ್ಮ ಕೆಲಸ ಆಗಿದೆ ಎಂದು ಹೇಳಿ 5 ಸಾವಿರ ರೂ.ಪಡೆದನು. ಅನಂತರ ನೊಂದ ಬಾಲಕಿಯೊಂದಿಗೆ ಸಲುಗೆಯಿಂದ ಮಾತನಾಡಿ ಆಕೆಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದನು ಎಂದು ದೂರಲಾಗಿದೆ

ಬಳಿಕ ಆಕೆಗೆ ನಿರಂತರವಾಗಿ ಕರೆಮಾಡಿ ಕಿರುಕುಳ ನೀಡುತ್ತಿದ್ದ‌ ಆರೋಪಿ, ನೊಂದ ಬಾಲಕಿ ತಾನು ಅಪ್ರಾಾಪ್ತೆ ಎಂದು ಹೇಳಿಕೊಂಡರೂ ಆತ ಆಕೆಯನ್ನು ಮದುವೆಯಾಗುವುದಾಗಿ ತಿಳಿಸಿ ಆಕೆಯ ಅಶ್ಲೀಲಚಿತ್ರಗಳನ್ನು ಕಳುಹಿಸುವಂತೆ ಹೇಳುತ್ತಿದ್ದನು. ಬಳಿಕ ಹೆಜಮಾಡಿಯ ಹೊಟೇಲ್‌ವೊಂದಕ್ಕೆ ಆಕೆಯನ್ನು ಬರಲು ಹೇಳಿದನು.

ಆಕೆ ನಿರಾಕರಿಸಿದಕ್ಕೆ ನೊಂದ ಬಾಲಕಿಯ ತಾಯಿಯ ವಿಧವಾ ವೇತನವನ್ನು ಬ್ಲಾಕ್ ಮಾಡುವುದಾಗಿ ಹೆದರಿಸಿದನು. ಅದರಂತೆ ಸಂತ್ರಸ್ತೆ ತನ್ನ ತಮ್ಮನೊಂದಿಗೆ ಹೊಟೇಲ್‌ಗೆ ಹೋದಾಗ ಆಕೆಯ ಅಶ್ಲೀಲ ಭಾವಚಿತ್ರ ನೀಡುವಂತೆ ತಿಳಿಸಿದನು. ಇದಕ್ಕೆ ಒಪ್ಪದಿದ್ದಾಗ ಆಕೆಯ ತಲೆಗೆ ಕೈಯಿಂದ ಹೊಡೆದಿದ್ದನು. ಈ ವಿಚಾರವನ್ನು ನೊಂದ ಬಾಲಕಿ ಹಾಗೂ ಆಕೆಯ ತಮ್ಮ ಮನೆಯವರಿಗೆ ತಿಳಿಸಿದ್ದು, ಅದರಂತೆ ಮನೆಯವರು ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆಗಿನ ಪೊಲೀಸ್ ಉಪನಿರೀಕ್ಷಕರಾಗಿದ್ದ ಸತೀಶ್ ಎಂ.ಪಿ. ಪ್ರಕರಣ ದಾಖಲಿಸಿಕೊಂಡು ಆಗಿನ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್,  ಆಗಿನ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್‌ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡು ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದಲ್ಲಿ ಒಟ್ಟು 46 ಸಾಕ್ಷಿಗಳನ್ನು ನಮೂದಿಸಲಾಗಿದ್ದು, ಈ ಪೈಕಿ 26 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಆರೋಪಿ ಲೈಂಗಿಕ ಹಲ್ಲೆ ನಡೆಸಿರುವುದು ಸಾಬೀತಾಗಿರುವುದಾಗಿ ದೃಢಪಡಿಸಿ ಆರೋಪಿಗೆ 3 ವರ್ಷಗಳ ಜೈಲುಶಿಕ್ಷೆ, ಪೋಕ್ಸೋ ಕಾಯ್ದೆಯಡಿ  1 ವರ್ಷ ಜೈಲು ಶಿಕ್ಷೆ ಮತ್ತು 4 ಸಾವಿರ ರೂ.ದಂಡ ಪಾವತಿಸಿ ಆದೇಶ ನೀಡಿದರು. ಸರಕಾರದಿಂದ ನೊಂದ ಬಾಲಕಿಗೆ 50 ಸಾವಿರ ರೂ.ಪರಿಹಾರ ನೀಡುವಂತೆ ನಿರ್ದೇಶಿಸಿ ಆದೇಶಿಸಿದರು.

ಆರೋಪಿಗೆ ಸಹಕರಿಸಿದ್ದಾರೆ ಎನ್ನಲಾದ 2ನೇ ಆರೋಪಿ ಪಂಚಾಯತ್ ಗ್ರಂಥಪಾಲಕಿಯ ವಿರುದ್ಧ ಮಾಡಲಾದ ದೋಷಾರೋಪಣೆ ಸಾಬೀತಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿಯನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ. ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು.

ಇತ್ತೀಚಿನ ಸುದ್ದಿ

Exit mobile version