ಸರ್ಕಾರಿ ಕಾಮಗಾರಿಗಳ ಶಿಲಾನ್ಯಾಸ ಪೂಜೆ ಮಾಡಲು ಬಂದಿದ್ದ ಅರ್ಚಕರನ್ನು ಹೊರಗೆ ಕಳುಹಿಸಿದ ಸಂಸದ!

ಧರ್ಮಪುರಿ: ಸರ್ಕಾರಿ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅರ್ಚಕರನ್ನು ಕರೆದು ಪೂಜೆ ಮಾಡಿಸಿದ್ದಕ್ಕೆ ಸಂಸದರೊಬ್ಬರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡು ಪೂಜೆ ಸ್ಥಗಿತಗೊಳಿಸಿದ ಘಟನೆ ತಮಿಳುನಾಡಿನ ಧರ್ಮಪುರಿಯಲ್ಲಿ ನಡೆದಿದೆ.
ಡಿಎಂಕೆ ಸಂಸದ ಡಾ.ಸೆಂಥಿಲ್ ಕುಮಾರ್ ಅವರು, ಸರ್ಕಾರಿ ಕಾರ್ಯಕ್ರಮದ ಶಿಲಾನ್ಯಾಸಕ್ಕೆ ಆಗಮಿಸಿದ್ದಾರೆ. ಈ ವೇಳೆ ಅಧಿಕಾರಿಗಳು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅರ್ಚಕರೊಬ್ಬರನ್ನು ಪೂಜೆಗೆ ನೇಮಿಸಿದ್ದರು. ಅರ್ಚಕರು ಪೂಜೆಗೆ ಸಿದ್ಧತೆ ನಡೆಸಿದ್ದರು. ಇದೇ ವೇಳೆ ಸ್ಥಳಕ್ಕೆ ಬಂದ ಸೆಂಥಿಲ್ ಕುಮಾರ್, ಪೂಜೆ ಮಾಡಲು ನಿಮಗೆ ಯಾರು ಹೇಳಿದರು ಎಂದು ಸ್ಥಳದಲ್ಲಿದ್ದ ಅರ್ಚಕರನ್ನು ತರಾಟೆಗೆತ್ತಿಕೊಂಡಿದ್ದಾರೆ.
ಈ ವೇಳೆ ಅಧಿಕಾರಿ ಸಾರಿ ಸರ್, ಎಂದು ನುಣುಚಿಕೊಳ್ಳಲು ಯತ್ನಿಸಿದ್ದು, ಏನು ಸಾರಿ? ನಿಮಗೆ ನಿಯಮಾವಳಿಗಳು ಇದೆಯಾ ಇಲ್ವಾ? ಏನಿದು? ಬೇರೆಯವರೆಲ್ಲ ಎಲ್ಲಿ? ಕ್ರಿಶ್ಚಿಯನ್ ಎಲ್ಲಿ? ಮುಸ್ಲಿಮ್ ಎಲ್ಲಿ?, ದ್ರಾವಿಡರು ಎಲ್ಲಿ? ಧರ್ಮವೇ ಇಲ್ಲದವರು ಎಲ್ಲಿ ಎಂದು ಅಧಿಕಾರಿಯನ್ನು ತರಾಟೆಗೆತ್ತಿಕೊಂಡರು.
ಚರ್ಚ್ ಫಾದರ್ ನ್ನು ಕರೆಯಿರಿ, ಇಮಾಂಗಳನ್ನು ಕರೆಯಿರಿ ಎಲ್ಲರನ್ನೂ ಕರೆಯಿರಿ. ಕೇವಲ ಒಂದು ಧರ್ಮದ ಆಚರಣೆ ಮಾತ್ರ ಯಾಕೆ ಮಾಡುತ್ತಿದ್ದೀರಿ ಎಂದು ಅವರು ಪ್ರಶ್ನಿಸಿದರು. ಸರ್ಕಾರಿ ಅಧಿಕಾರಿಯಾಗಿ ನಿಮಗೆ ಇದು ಗೊತ್ತಿಲ್ವಾ? ಈ ರೀತಿಯೆಲ್ಲ ಮಾಡ್ತೀರಾದ್ರೆ ದಯವಿಟ್ಟು ನನ್ನನ್ನು ಕರೆಯಬೇಡಿ. ಇದು ದ್ರಾವಿಡ ನಾಡು ಬೇರೆ ರಾಜ್ಯಗಳಂತೆ ಅಲ್ಲ. ನೀವು ಧಾರ್ಮಿಕ ಆಚರಣೆ ಮಾಡಿ, ಬೇಡಾಂತ ಹೇಳುವುದಿಲ್ಲ. ಆದರೆ, ಎಲ್ಲ ಧರ್ಮೀಯರನ್ನೂ ಕರೆಯಿರಿ. ದೇವರ ಮೇಲೆ ನಂಬಿಕೆ ಇಲ್ಲದವರನ್ನೂ ಕರೆಯಿರಿ, ಚರ್ಚ್ ಫಾದರ್ ಅವರನ್ನೂ ಕರೆಯಿರಿ, ಮುಸ್ಲಿಮರನ್ನೂ ಕರೆಯಿರಿ ಎಲ್ಲರನ್ನೂ ಕರೆಯಿರಿ ಎಂದರು.
ಬಳಿಕ ಪೂಜೆಗೆ ಆಗಮಿಸಿದ್ದ ಅರ್ಚಕರನ್ನು ಹೊರಗೆ ಕಳುಹಿಸಿ, ಸಂಸದರು ಶಿಲಾನ್ಯಾಸ ಕಾರ್ಯಕ್ರಮವನ್ನು ತಾವೇ ಮುಂದೆ ನಿಂತು ನಡೆಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ ವಿರೋಧ ಚರ್ಚೆಗಳಿಗೆ ಕಾರಣವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka