ರಸ್ತೆಯಲ್ಲೇ ಬಾಲಕನ ಮೇಲೆ ಭೀಕರವಾಗಿ ದಾಳಿ ನಡೆಸಿದ ಬೀದಿನಾಯಿ!

23/02/2024
ಚಿಕ್ಕಮಗಳೂರು: ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಯೊಂದು ಭೀಕರವಾಗಿ ದಾಳಿ ನಡೆಸಿದ ಘಟನೆ ಚಿಕ್ಕಮಗಳೂರು ನಗರದ ಹೊರವಲಯದ ಆದಿಶಕ್ತಿ ನಗರದಲ್ಲಿ ನಡೆದಿದೆ.
ಘಟನೆ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಬಾಲಕನ ಮೇಲೆ ಏಕಾಏಕಿ ಬೀದಿನಾಯಿ ಭೀಕರವಾಗಿ ದಾಳಿ ಮಾಡಿದೆ. ಈ ವೇಳೆ ಬಾಲಕನ ಕಿರುಚಾಟ ಕೇಳಿ ಸ್ಥಳೀಯರು ಬಂದು ನಾಯಿಯನ್ನು ಓಡಿಸಿ ಬಾಲಕನನ್ನು ರಕ್ಷಿಸಿದ್ದಾರೆ.
ಬೀದಿನಾಯಿಯ ದಾಳಿಯಿಂದಾಗಿ 8 ವರ್ಷ ವಯಸ್ಸಿನ ಮುಜಾಮಿಲ್ ಎಂಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಬಾಲಕನನ್ನು ನೆಲಕ್ಕೆ ಕೆಡವಿದ ನಾಯಿ ಕೆನ್ನೆಗೆ ಕಚ್ಚಿದ್ದು, ಇದರಿಂದಾಗಿ ಬಾಲಕನಿಗೆ ತೀವ್ರವಾಗಿ ಗಾಯವಾಗಿದೆ.
ಸದ್ಯ ಬಾಲಕನಿಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಸಿ ಕ್ಯಾಮರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿದ್ದು, ಬೆಚ್ಚಿಬೀಳಿಸುವಂತಿದೆ.