ಮಹಿಳೆಯ ಅನುಮಾನಾಸ್ಪದ ಸಾವು: ಬಾವಿಯಲ್ಲಿ ಮೃತದೇಹ ಪತ್ತೆ

ಬೆಳ್ತಂಗಡಿ: ಮಹಿಳೆಯೊಬ್ಬರ ಮೃತದೇಹವು ಬಾವಿಯಲ್ಲಿ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬೆಳಾಲು ಗ್ರಾಮದ ಮಾಚಾರು ಸಮೀಪದ ಕೆಂಪನೊಟ್ಟು ಎಂಬಲ್ಲಿನ ತೋಟವೊಂದರಲ್ಲಿ ನಡೆದಿದೆ.
ಶಶಿಕಲಾ (27) ಮೃತ ಮಹಿಳೆ. ಶಶಿಕಲಾ ಹಾಗೂ ಅವರ ಪತಿ ಸುಧಾಕರ ನಾಯ್ಕ ಇಲ್ಲಿ ತೋಟವೊಂದರಲ್ಲಿ ಕೆಲಸಕ್ಕಿದ್ದರು. ಇವರಿಗೆ ಓರ್ವ ಮಗಳಿದ್ದು, ತನ್ನ ತಾಯಿಯ ಮನೆಗೆ ಹೋಗಿದ್ದಳು ಎನ್ನಲಾಗಿದೆ. ಗುರುವಾರ ರಾತ್ರಿ ಪತಿ ಪತ್ನಿ ಮಾತ್ರ ಮನೆಯಲ್ಲಿದ್ದರು.
ಇಂದು ಪತಿ ಸುಧಾಕರ ರಬ್ಬರ್ ಟ್ಯಾಪಿಂಗ್ ಮಾಡಲು ಹೋಗಿದ್ದರು. ಇದೇ ವೇಳೆ ಶಶಿಕಲಾ ಅವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ನಂತರ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಲಾಯಿತು. ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೆ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಬೇಕಾಗಿದೆ.
ಇದೊಂದು ಕೊಲೆ ಪ್ರಕರಣ ಎಂಬ ಅನುಮಾನ ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸುಧಾಕರ ನಾಯ್ಕನನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.