3:54 PM Wednesday 24 - December 2025

ಯುವ ಕುಸ್ತಿ ಪಟುಗಳಿಗೆ ರೈಲಿನಲ್ಲಿ ನರಕಯಾತನೆ: ಶೌಚಾಲಯದ ಬಳಿ ಕುಳಿತು ಕ್ರೀಡಾಪಟುಗಳ ಪ್ರಯಾಣ!

young wrestlers odisha
24/12/2025

ಭುವನೇಶ್ವರ್: ದೇಶದ ಕೀರ್ತಿ ಪತಾಕೆ ಹಾರಿಸಬೇಕಾದ ಕ್ರೀಡಾಪಟುಗಳಿಗೆ ರೈಲಿನಲ್ಲಿ ಅಮಾನವೀಯ ಅನುಭವವಾಗಿದೆ. ಉತ್ತರ ಪ್ರದೇಶದಲ್ಲಿ ನಡೆದ 69ನೇ ರಾಷ್ಟ್ರೀಯ ಶಾಲಾ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡು ಒಡಿಶಾಗೆ ಮರಳುತ್ತಿದ್ದ 18 ಯುವ ಕುಸ್ತಿ ಪಟುಗಳು ರೈಲಿನಲ್ಲಿ ಶೌಚಾಲಯದ ಬಳಿಯೇ ಕುಳಿತು ಪ್ರಯಾಣಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಒಡಿಶಾದ ಶಾಲಾ ಶಿಕ್ಷಣ ಮತ್ತು ಸಮೂಹ ಶಿಕ್ಷಣ ಇಲಾಖೆಯ ವತಿಯಿಂದ 10 ಹುಡುಗರು ಹಾಗೂ 8 ಹುಡುಗಿಯರ ತಂಡ ಈ ಸ್ಪರ್ಧೆಗೆ ತೆರಳಿತ್ತು. ಆದರೆ, ಕ್ರೀಡಾಪಟುಗಳಿಗೆ ಮುಂಗಡ ಕಾಯ್ದಿರಿಸಿದ (Reserved) ಟಿಕೆಟ್ ವ್ಯವಸ್ಥೆ ಮಾಡಲು ಇಲಾಖೆ ವಿಫಲವಾಗಿತ್ತು. ಪರಿಣಾಮವಾಗಿ, ಈ ಪ್ರತಿಭಾವಂತ ಕ್ರೀಡಾಪಟುಗಳು ಅನಿವಾರ್ಯವಾಗಿ ರೈಲಿನ ಜನರಲ್ ಬೋಗಿಯ ಶೌಚಾಲಯದ ಬಳಿಯೇ ನೆಲದ ಮೇಲೆ ಕುಳಿತು ನೂರಾರು ಕಿಲೋಮೀಟರ್ ಪ್ರಯಾಣಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರಿ ಇಲಾಖೆಗಳ ನಿರ್ಲಕ್ಷ್ಯದ ವಿರುದ್ಧ ಕ್ರೀಡಾಪ್ರೇಮಿಗಳು ಕಿಡಿಕಾರಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಒಡಿಶಾದ ಶಿಕ್ಷಣ ಸಚಿವ ನಿತ್ಯಾನಂದ ಗೊಂಡ್, ಇದೊಂದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಕ್ರೀಡಾಪಟುಗಳ ಈ ದುಸ್ಥಿತಿಯು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version