2:55 PM Wednesday 27 - August 2025

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ: ಮೂವರು ಸೇನಾಧಿಕಾರಿಗಳು ಹುತಾತ್ಮ

14/09/2023

ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನಾ ಕರ್ನಲ್, ಮೇಜರ್ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಹುತಾತ್ಮರಾಗಿದ್ದಾರೆ. ಅನಂತ್ ನಾಗ್ ಜಿಲ್ಲೆಯ ಕೊಕರ್ನಾಗ್ ಪ್ರದೇಶದಲ್ಲಿ ಅಡಗಿದ್ದ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್ ಕೌಂಟರ್ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಸೇನಾ ರಾಷ್ಟ್ರೀಯ ರೈಫಲ್ಸ್ ಘಟಕದ ಕಮಾಂಡಿಂಗ್ ಆಫೀಸರ್ (ಕರ್ನಲ್), ಕಂಪನಿ ಕಮಾಂಡರ್ (ಮೇಜರ್) ಮತ್ತು ಜೆ & ಕೆ ಪೊಲೀಸ್ ಡಿಎಸ್ಪಿ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾರೆ. ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಎನ್ ಕೌಂಟರ್ ಇನ್ನೂ ನಡೆಯುತ್ತಿದೆ.

ಗುಂಡಿನ ಚಕಮಕಿಯಲ್ಲಿ ಕರ್ನಲ್ ಮನ್ ಪ್ರೀತ್ ಸಿಂಗ್, ಮೇಜರ್ ಆಶಿಶ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಉಪ ಅಧೀಕ್ಷಕ ಹುಮಾಯೂನ್ ಭಟ್ ಅವರು ಗಂಭೀರವಾಗಿ ಗಾಯಗೊಂಡ ನಂತರ ಸಾವನ್ನಪ್ಪಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಗುಪ್ತಚರ ಮಾಹಿತಿ ಆಧಾರದ ಮೇಲೆ ಈ ಪ್ರದೇಶದಲ್ಲಿ ಭಯೋತ್ಪಾದಕರನ್ನು ಹುಡುಕಲು ಹೋದ ನಂತರ ಸೇನಾ ಅಧಿಕಾರಿಗಳು ತಮ್ಮ ಪಡೆಗಳನ್ನು ಮುಂಚೂಣಿಯಿಂದ ಮುನ್ನಡೆಸುತ್ತಿದ್ದರು. ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್, ಕಾಶ್ಮೀರದ ಎಡಿಜಿಪಿ ವಿಜಯ್ ಕುಮಾರ್ ಮತ್ತು ಸೇನಾ ಸಿಬ್ಬಂದಿ ಎನ್ ಕೌಂಟರ್ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.

ಇತ್ತೀಚಿನ ಸುದ್ದಿ

Exit mobile version