ಸಾಲ ಬಾಧೆಗೆ ಕಡೂರು ತಾಲೂಕಿನಲ್ಲಿ ಇಬ್ಬರು ರೈತರ ಆತ್ಮಹತ್ಯೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಬೆಳೆ ಹಾನಿಯಾಗಿ, ಸಾಲದ ಹೊರೆ ಹೆಚ್ಚಾದ ಕಾರಣ ಕಡೂರು ತಾಲೂಕಿನಲ್ಲಿ ಕೇವಲ ಮೂರು ದಿನಗಳ ಅಂತರದಲ್ಲಿ ಇಬ್ಬರು ರೈತರು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ವರದಿಯಾಗಿದೆ. ಕಡೂರು ತಾಲೂಕಿನ ಭೈರಗೊಂಡನಹಳ್ಳಿ ಹಾಗೂ ಕೊತ್ತಿಗೆರೆ ಗ್ರಾಮಗಳಲ್ಲಿ ಈ ದುರ್ಘಟನೆಗಳು ಜರುಗಿದೆ.
ಭೈರಗೊಂಡನಹಳ್ಳಿ ಗ್ರಾಮದ 44 ವರ್ಷದ ಬಸವರಾಜ್ ಅವರು ತಮ್ಮ 3 ಎಕರೆ ಜಮೀನು ಅಭಿವೃದ್ಧಿಗಾಗಿ ಖಾಸಗಿ ಫೈನಾನ್ಸ್ ಹಾಗೂ ಕೈ ಸಾಲ ಸೇರಿದಂತೆ ಒಟ್ಟು ನಾಲ್ಕು ಲಕ್ಷ ಎಂಭತ್ತು ಸಾವಿರ ರೂಪಾಯಿ ಸಾಲ ಮಾಡಿದ್ದರು. ಆದರೆ ಮಳೆಯಿಲ್ಲದೆ ಬೆಳೆ ಸಂಪೂರ್ಣ ವಿಫಲವಾಗಿದ್ದರಿಂದ, ಮಾಡಿದ ಸಾಲವನ್ನು ಹೇಗೆ ತೀರಿಸುವುದೆಂಬ ಚಿಂತೆಯಿಂದ ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅದೇ ರೀತಿ, ಕೊತ್ತಿಗೆರೆ ಗ್ರಾಮದ 60 ವರ್ಷದ ಶಂಕರಯ್ಯ ಅವರು ಮೂರು ಎಕರೆ ಕೃಷಿ ಚಟುವಟಿಕೆಗಳಿಗಾಗಿ ಒಟ್ಟು ನಾಲ್ಕು ಲಕ್ಷ ರೂಪಾಯಿ ಖಾಸಗಿ ಫೈನಾನ್ಸ್ ಮತ್ತು ಕೈ ಸಾಲ ಮಾಡಿದ್ದರು. ನಿರೀಕ್ಷಿತ ಬೆಳೆ ಬಾರದೇ ಸಾಲದ ಸುಳಿಗೆ ಸಿಲುಕಿದ್ದ ಅವರು ತೀವ್ರ ಮನನೊಂದು ವಿಷ ಸೇವಿಸಿ ಜೀವ ಬಿಟ್ಟಿದ್ದಾರೆ.
ಕಡೂರು ತಾಲೂಕಿನಲ್ಲಿ ಮಳೆರಾಯ ಸಂಪೂರ್ಣ ಕೈಕೊಟ್ಟಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾಸಗಿ ಫೈನಾನ್ಸ್ ಹಾಗೂ ಕೈ ಸಾಲ ತೀರಿಸಲಾಗದೆ ಕೇವಲ ಮೂರು ದಿನಗಳ ಅಂತರದಲ್ಲಿ ಇಬ್ಬರು ರೈತರು ಪ್ರಾಣ ಕಳೆದುಕೊಂಡಿರುವುದು ಗ್ರಾಮಸ್ಥರು ಹಾಗೂ ರೈತಪರ ಸಂಘಟನೆಗಳಲ್ಲಿ ತೀವ್ರ ಶೋಕವನ್ನುಂಟುಮಾಡಿದೆ. ಈ ಸಂಬಂಧ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

























