ವಿಪಕ್ಷಗಳ ಮೈತ್ರಿ ಬಗ್ಗೆ ವ್ಯಂಗ್ಯ: ಅದು ‘ಇಂಡಿ’ ಮೈತ್ರಿ ಅಲ್ಲ ‘ಘಮಂಡಿ‌ ಮೈತ್ರಿ’ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

16/09/2023

ಈ ವರ್ಷದ ಅಂತ್ಯದಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಬಿಜೆಪಿ ತಾಲೀಮು ಜೋರಾಗಿದೆ. ರಾಜಸ್ಥಾನ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಬಿಜೆಪಿಯು ಅಲ್ಲಿನ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿ ತೀವ್ರ ವಾಗ್ದಾಳಿ ಆರಂಭಿಸಿದೆ.

ರಾಜಸ್ಥಾನದ ದೂದೂವಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ವಿರುದ್ಧ ವಾಗ್ಧಾಳಿ ನಡೆಸಿದರು. ಜೊತೆಗೆ, ಸನಾತನ ಧರ್ಮ ವಿಚಾರವಾಗಿ ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆಗಳ ಬಗ್ಗೆ ಅಶೋಕ್ ಗೆಹ್ಲೋಟ್ ಅವರ ನಿಲುವನ್ನು ಪ್ರಶ್ನಿಸಿದ್ದಾರೆ.
‘ಕೆಲವೇ ಜನರು ಇದನ್ನು INDIA ಮೈತ್ರಿ ಎಂದು ಕರೆಯುತ್ತಾರೆ. ಆದರೆ ಇದು INDI ಮೈತ್ರಿ. ಯಾಕೆಂದರೆ ನೀವು ಎರಡು ಬಾರಿ ಮೈತ್ರಿ ಎಂದು ಕರೆಯಲು ಸಾಧ್ಯವಿಲ್ಲ. ಇದು INDI ಮೈತ್ರಿಯಲ್ಲ, ಇದು ಘಮಂಡಿ ಮೈತ್ರಿ’ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.

‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ಸನಾತನ ಧರ್ಮ ಎಂಬುದು ಒಂದು ಕಾಯಿಲೆಯಂತೆ ಎಂದು ಹೇಳಿದ್ದಾರೆ. ಈ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ಕಾಂಗ್ರೆಸ್ ಮತ್ತು ಅಶೋಕ್ ಗೆಹ್ಲೋಟ್ ಅವರನ್ನು ಜೋಶಿ ಪ್ರಶ್ನಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version