ದುರಂತ: ರೈಲಿನ ಬಾಗಿಲಿಗೆ ಸೀರೆ ಸಿಲುಕಿ ಮಹಿಳೆ ಸಾವು

ದೆಹಲಿಯ ಇಂದರ್ ಲೋಕ್ ನಿಲ್ದಾಣದಲ್ಲಿ ಮೆಟ್ರೋದಲ್ಲಿ ಬಂದ ಮಹಿಳೆಯೊಬ್ಬರ ಸೀರೆ ರೈಲಿನ ಬಾಗಿಲುಗಳ ನಡುವೆ ಸಿಲುಕಿ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. 35 ವರ್ಷದ ಮಹಿಳೆ ಮೆಟ್ರೋ ಹತ್ತುತ್ತಿದ್ದರೇ ಅಥವಾ ಇಳಿಯುತ್ತಿದ್ದರೇ ಎಂಬುದು ಸ್ಪಷ್ಟವಾಗಿಲ್ಲ. ಈ ಘಟನೆ ಡಿಸೆಂಬರ್ 14 ರ ಗುರುವಾರ ನಡೆದಿದ್ದು, ಮಹಿಳೆ ಎರಡು ದಿನಗಳ ನಂತರ ಆಸ್ಪತ್ರೆಯಲ್ಲಿ ಶನಿವಾರ ಸಾವನ್ನಪ್ಪಿದ್ದಾರೆ.
ಮಹಿಳೆಯ ಸಂಬಂಧಿ ವಿಕ್ಕಿ ಪ್ರಕಾರ, ಪಶ್ಚಿಮ ದೆಹಲಿಯ ನಂಗ್ಲೋಯಿಯಿಂದ ಮೋಹನ್ ನಗರಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. “ಅವಳು ಇಂದರ್ ಲೋಕ್ ಮೆಟ್ರೋ ನಿಲ್ದಾಣವನ್ನು ತಲುಪಿ ರೈಲನ್ನು ಬದಲಾಯಿಸುತ್ತಿದ್ದಾಗ, ಅವಳ ಸೀರೆ ಸಿಕ್ಕಿಹಾಕಿಕೊಂಡಿತು.
ಅವಳು ಬಿದ್ದು ಗಂಭೀರವಾಗಿ ಗಾಯಗೊಂಡಳು. ಆಕೆಯನ್ನು ಗಂಭೀರ ಸ್ಥಿತಿಯಲ್ಲಿ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಸಂಜೆ ಅವರು ನಿಧನರಾದರು” ಎಂದು ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಮಹಿಳೆಯ ಪತಿ ಸುಮಾರು ಏಳು ವರ್ಷಗಳ ಹಿಂದೆ ನಿಧನರಾಗಿದ್ದರು. ಮಹಿಳೆಯು ಓರ್ವ ಮಗ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ದೆಹಲಿ ಮೆಟ್ರೋದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನುಜ್ ದಯಾಳ್ ಮಾತನಾಡಿ, “ಡಿಸೆಂಬರ್ 14 ರಂದು ಇಂದರ್ ಲೋಕ್ ಮೆಟ್ರೋ ನಿಲ್ದಾಣದಲ್ಲಿ ಒಂದು ಘಟನೆ ನಡೆದಿದ್ದು, ಮಹಿಳಾ ಪ್ರಯಾಣಿಕರ ಬಟ್ಟೆಗಳು ರೈಲಿಗೆ ಸಿಲುಕಿ ಗಾಯಗೊಂಡು ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು” ಎಂದು ಹೇಳಿದರು.