ಗೃಹಲಕ್ಷ್ಮೀ ಯೋಜನೆ ಹಣದಿಂದ ಮಗನಿಗೆ ಬೈಕ್ ಕೊಡಿಸಿದ ಮಹಿಳೆ!

ಬೆಳಗಾವಿ: ಗೃಹಲಕ್ಷ್ಮಿ ಹಣದಿಂದ ಮಹಿಳೆಯೊಬ್ಬರು ತನ್ನ ಮಗನಿಗೆ ಬೈಕ್ ಕೊಡಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬಾಗವ್ವಾ ನೀಲಪ್ಪ ಸಣ್ಣಕ್ಕಿ ಎಂಬ ಮಹಿಳೆ ಗೃಹ ಲಕ್ಷ್ಮೀ ಹಣವನ್ನು ಕೂಡಿಟ್ಟು ತನ್ನ ಮಗನಿಗೆ ಬೈಕ್ ಕೊಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ನೀಲಪ್ಪ ಸಣ್ಣಕ್ಕಿ ಅವರು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಯಾಗಿದ್ದಾರೆ. ಮಗ ರಮೇಶ ನೀಲಪ್ಪ ಸಣ್ಣಕ್ಕಿಗೆ ಬೈಕ್ ಖರೀದಿಸಲು ತಾಯಿ ತನಗೆ ಬಂದಿರುವ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಬಳಸಿದ್ದಾರೆ.
ಬೈಕ್ ಖರೀದಿಗೆ ಗೃಹಲಕ್ಷ್ಮೀ ಹಣವನ್ನು ಮುಂಗಡ ಪಾವತಿ ಮಾಡಿದ್ದಾರೆ. ಮಹಿಳೆಯ ಕಾರ್ಯವನ್ನು ರಾಜ್ಯ ಮಹಿಳಾ ಮತ್ತು ಮಕ್ಳಳ ಕಲ್ಯಾಣ ಸಚಿವೆಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಶ್ಲಾಘಿಸಿದ್ದಾರೆ.
ಪತ್ರದ ಮೂಲಕ ಶ್ಲಾಘನೆ ತಿಳಿಸಿರುವ ಸಚಿವರು, ಕರ್ನಾಟಕ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ತಮ್ಮ ಮಗನಿಗೆ ದ್ವಿಚಕ್ರ ವಾಹನ ಖರೀದಿಸಲು ಮುಂಗಡ ಹಣವನ್ನು ತಾವು ನೀಡಿರುವ ವಿಷಯ ಕೇಳಿ ಇಲಾಖೆಯ ಮಂತ್ರಿಯಾದ ನನಗೆ ಅತೀವ ಖುಷಿ ತಂದಿದೆ. ಗೃಹಲಕ್ಷ್ಮೀ ಯೋಜನೆಯಿಂದ ರಾಜ್ಯದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವುದರ ಜೊತೆಯಲ್ಲಿ ಮನೆಯ ಪುರುಷರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿರುವುದು ನಿಜಕ್ಕೂ ಮಹಿಳೆಯರ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಬರೆದಿದ್ದಾರೆ.
ವಿಜಯದಶಮಿ ಹಬ್ಬದ ಈ ಶುಭ ಸಂದರ್ಭದಲ್ಲಿ ತಮ್ಮ ಈ ಕಾರ್ಯವು ನಿಜಕ್ಕೂ ಶ್ಲಾಘನೀಯ. ಈ ಯೋಜನೆಯ ರೂವಾರಿಗಳಾದ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರು ಹಾಗೂ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಮೇಲೆ ತಮ್ಮ ಪ್ರೀತಿ ವಿಶ್ವಾಸ ಹೀಗೆಯೇ ಮುಂದುವರಿಯಲೆಂದು ಬಯಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj