11:26 PM Thursday 6 - November 2025

ಪೂಜೆ ಮಾಡ್ತೀನಿ ಅಂತ ಮೋಸ ಮಾಡಿದ: ತಂತ್ರಿಯನ್ನು ನಂಬಿ ಹಣ, ಲಕ್ಷಾಂತರ ಮೌಲ್ಯದ ಆಭರಣ ಕಳೆದುಕೊಂಡ ಮಹಿಳೆ!

fraud
11/10/2023

ಉಡುಪಿ: ಯಕ್ಷಿಣಿ ವಿದ್ಯೆಯ ಮೂಲಕ ಕಷ್ಟ ಪರಿಹಾರ ಮಾಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 20ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಜೆ.ಪಿ.ನಗರದ ಪ್ರತಿಭಾ(48) ಎಂಬವರಿಗೆ ಪ್ರವೀಣ್ ತಂತ್ರಿ ಎಂಬಾತನು ಸುಮಾರು 5–6 ತಿಂಗಳುಗಳ ಹಿಂದೆ ಪರಿಚಯವಾಗಿದ್ದು, ಪ್ರತಿಭಾ ಅವರಿಗೆ ಇರುವ ಸಮಸ್ಯೆಗಳನ್ನು ಯಕ್ಷಿಣಿ ವಿದ್ಯೆಯ ಮುಖಾಂತರ ಕಷ್ಟ ಪರಿಹಾರ ಮಾಡುವುದಾಗಿ ಪ್ರವೀಣ್ ನಂಬಿಸಿದ್ದನು. ಇದನ್ನು ನಂಬಿದ ಪ್ರತಿಭಾ ಹಂತ ಹಂತವಾಗಿ ಸುಮಾರು 1 ಲಕ್ಷದವರೆಗೆ ಹಣವನ್ನು ಆತನಿಗೆ ನೀಡಿದ್ದರು.

ನಂತರ ಪ್ರತಿಭಾ ಅವರ ಗಂಡ ಮತ್ತು ಮಕ್ಕಳು ಹಾಕಿಕೊಳ್ಳುವ ಆಭರಣಗಳನ್ನು ಪೂಜೆ ಮಾಡಿಸಬೇಕೆಂದು ಹೇಳಿ, ಮೇ 24ರಂದು ಕಾಸರಗೋಡು ಜಿಲ್ಲೆಯ ಐಲಾ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುಮಾರು 20 ಲಕ್ಷ ಮೌಲ್ಯದ ಒಟ್ಟು 340 ಗ್ರಾಂ ತೂಕದ ಚಿನ್ನಾಭರಣಗಳನ್ನು ಪ್ರತಿಭಾ ಅವರಿಂದ ಪಡೆದನು ಎಂದು ದೂರಲಾಗಿದೆ. ಬಳಿಕ ಆರೋಪಿ ಅವುಗಳನ್ನು ಪ್ರತಿಭಾ ಅವರಿಗೆ ವಾಪಾಸು ಕೊಡದೆ ನಂಬಿಕೆದ್ರೋಹ ಎಸಗಿ, ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಇತ್ತೀಚಿನ ಸುದ್ದಿ

Exit mobile version