ಜೈಲಿನಲ್ಲಿದ್ದುಕೊಂಡೇ ಯುವತಿಯ ಬೆತ್ತಲೆ ಫೋಟೋ ಕಳಿಸಿ ಬ್ಲ್ಯಾಕ್ ಮೇಲ್!

ಬೆಂಗಳೂರು: ಯುವತಿಯ ಮಾರ್ಫ್ ಮಾಡಿದ ಬೆತ್ತಲೆ ಫೋಟೋ ಕಳುಹಿಸಿದ ಜೈಲು ಹಕ್ಕಿಯೋರ್ವ ಜೈಲಿನಲ್ಲಿದ್ದುಕೊಂಡೇ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಬ್ಲ್ಯಾಕ್ ಮೇಲೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ರೌಡಿ ಮನೋಜ್ ಅಲಿಯಾಸ್ ಕೆಂಚ ಜೈಲಿನಲ್ಲಿದ್ದುಕೊಂಡೇ ಈ ಕೃತ್ಯ ಎಸಗಿದ್ದಾನೆ. ಯುವತಿಯ ತಾಯಿಗೆ ಮಗಳ ಬೆತ್ತಲೆ ಫೋಟೋ ಕಳುಹಿಸಿ ಮೊದಲು 40 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. ಅದರಂತೆ ಯುವತಿಯ ತಾಯಿ ಚೋಟು ಎಂಬವನ ಖಾತೆಗೆ 20 ಸಾವಿರ ಹಣ ಮತ್ತೋರ್ವನ ಖಾತೆಗೆ 20 ಸಾವಿರ ಹಣ ಹಾಕಿದ್ದರು.
ನಂತರ ಕೆಂಚ(ಮನೋಜ್)ನ ಸ್ನೇಹಿತ ಅಂತ ಹೇಳಿಕೊಂಡು ಕರೆ ಮಾಡಿದ ಕಾರ್ತಿಕ್ ಎಂಬಾತ ನಿಮ್ಮ ಮಗಳ ಫೋಟೋ ನಮ್ಮ ಬಳಿ ಇದೆ, ಅದನ್ನು ನಿಮ್ಮ ಅಳಿಯನಿಗೆ ಕಳುಹಿಸುತ್ತೇವೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದು, 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಅಲ್ಲದೇ ಫೆ.12ರಂದು ವಿವಿಧ ಸಾಮಾಜಿಕ ಜಾಲತಾಣಗಳಿಂದ ಕಾಲ್ ಮಾಡಿ ನಿಂದಿಸಿದ್ದಾನೆ. ಇದರಿಂದ ನೊಂದ ಯುವತಿ ಹಾಗೂ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ ಮಹಿಳೆಯ ದೂರಿನನ್ವಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಯಲಹಂಕ ಟೌನ್ ಪೊಲೀಸರು ಆರೋಪಿ ಕಾರ್ತಿಕ್ ಗಾಗಿ ಬಲೆ ಬೀಸಿದ್ದಾರೆ. ಜೈಲಿನಲ್ಲಿರುವ ಆರೋಪಿ ಮನುವನ್ನು ಬಾಡಿವಾರೆಂಟ್ ಮೂಲಕ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.