ಕಿತ್ಹೋಗಿರೋ ಹೈಟೇಕ್ ರಸ್ತೆಯ ಉದ್ಘಾಟನಾ ಸಮಾರಂಭದ ಕರೆಯೋಲೆ ವೈರಲ್!

chikamagalore
15/02/2024

ಚಿಕ್ಕಮಗಳೂರು: 20 ವರ್ಷಗಳಿಂದ ರಸ್ತೆ ಕಾಮಗಾರಿ ನಡೆಯದೇ ರಸ್ತೆ ಚಿಂತಾಜನಕ ಸ್ಥಿತಿಯಲ್ಲಿದೆ. ಈ ರಸ್ತೆಯ ನವೀಕರಣಕ್ಕೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಶ್ರಮಿಸುತ್ತಿಲ್ಲ ಎಂದು ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯವನ್ನು ಅಣಕಿಸಿರುವ ಗ್ರಾಮಸ್ಥರು ಕಿತ್ತು ಹೋಗಿರುವ ರಸ್ತೆಯನ್ನೇ ಉದ್ಘಾಟನೆ ಮಾಡಲು ಮುಂದಾಗಿದ್ದು, ಬಣಕಲ್ ನ ಹೈಟೆಕ್ ರಸ್ತೆಯ ಉದ್ಘಾಟನಾ ಕಾರ್ಯಕ್ರಮದ ಕರೆಯೋಲೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಯಬಿಟ್ಟಿದ್ದಾರೆ. ಆ ಸಂದೇಶವನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ.

ಸತತ 20 ವರ್ಷಗಳ ರಾಜಕೀಯ ನಾಯಕರ ಪರಿಶ್ರಮದಿಂದ ಬಣಕಲ್ ಗ್ರಾಮ ಪಂಚಾಯಿತಿಯಿಂದ ಅಂಬೇಡ್ಕರ್ ಭವನದ ವರಗಿನ ರಸ್ತೆ, ಮತ್ತು ಸುಭಾಷ್ ನಗರ ಗಣಪತಿ ಪೆಂಡಲ್ ನಿಂದ ಸೊಸೈಟಿವರೆಗಿನ ರಸ್ತೆಯು ಯು 12,000 ಕೋಟಿ ರೂಗಳಲ್ಲಿ ನವೀಕರಣಗೊಂಡಿದ್ದು ಇದರ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 1.3.2024ರಂದು ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ರಸ್ತೆಯ ಅಭಿವೃದ್ಧಿಗೆ ಶ್ರಮಿಸಿದ 20 ವರ್ಷದಿಂದ ರಾಜಕೀಯ ಮಾಡಿದ ಮಾಜಿ ಹಾಗೂ ಹಾಲಿ mla, mp, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧ್ಯಕ್ಷರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವ ಮೂಲಕ ಬಣಕಲ್ನ ಸರ್ವ ಸದಸ್ಯರ ಪರವಾಗಿ ಸನ್ಮಾನ ಮಾಡಲಾಗುತ್ತದೆ.

ಈ ಒಂದು ರಸ್ತೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಪಾನೀಯ ತೋರಣ ಮತ್ತು ಹೂವಿನ ಅಲಂಕಾರದ ಜವಾಬ್ದಾರಿಯನ್ನು ಸನ್ ಶೈನ್ ಫ್ರೆಂಡ್ಸ್ ಬಣಕಲ್ ವಹಿಸಿಕೊಂಡರೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಫ್ರೇಂಡ್ಸ್ ಕ್ಲಬ್ ಬಣಕಲ್, ಡಿಜೆ ಮತ್ತು ದೀಪಾಲಂಕಾರವನ್ನು ವಾಹನ ಚಾಲಕರ ಸಂಘ, ಬಂದಂತಹ ಅತಿಥಿಗಳಿಗೆ ಸತ್ಕಾರವನ್ನು ಮಹಿಳಾ ಸ್ವಸಹಾಯ ಸಂಘ, ಮನೋರಂಜನ ವ್ಯವಸ್ಥೆಯನ್ನು ಬಣಕಲ್ನ ಎಲ್ಲಾ ಶಾಲಾ ವಿದ್ಯಾರ್ಥಿಗಳು ವಹಿಸಿಕೊಂಡಿರುತ್ತಾರೆ

ಈ ಕಾರ್ಯಕ್ರಮವು ಸತತ ಏಳು ದಿನಗಳ ಕಾಲ ನಡೆಯಲಿದ್ದು ಪ್ರತಿದಿನ ಮಧ್ಯಾಹ್ನ ರಾಜಕೀಯ ನಾಯಕರಿಗೆ ಮಾತ್ರ ಊಟದ ವ್ಯವಸ್ಥೆ ಇರುತ್ತದೆ.

ಈ ರಸ್ತೆಯ ವೈಶಿಷ್ಟಗಳು:

1.ಯಾವುದೇ ರೀತಿಯ ಬೆನ್ನು ನೋವು ಕೈಕಾಲು ನೋವು ಒಂದು ಬಾರಿ ನಡೆದರೆ ಮಾಯವಾಗುತ್ತದೆ.

2. ವಾಹನಗಳ ಬಿಡಿ ಭಾಗಗಳ ಪರಿಚಯವಾಗುತ್ತದೆ ಹಾಗೂ ಗ್ಯಾರೇಜ್ ಮಾಲೀಕರಿಗೆ ಹೆಚ್ಚಿನ ಆದಾಯ ತರುತ್ತದೆ.

3. ಮಳೆಗಾಲದಲ್ಲಿ ಶಾಲಾ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸಮವಸ್ತ್ರದಲ್ಲಿ ವಿಭಿನ್ನ ರೀತಿಯ ಗ್ರಾಫಿಕ್ಸ್ ಗಳು ತನ್ನಷ್ಟಕ್ಕೆ ಉದ್ಭವವಾಗುತ್ತದೆ

3. ಕೆಮ್ಮು ಶೀತ ಅಲರ್ಜಿ ಇಷ್ಟರವರೆಗೆ ಆಗದವರಿಗೆ ಒಂದೇ ದಿನದಲ್ಲಿ ಆಗುತ್ತದೆ

4. ಮದ್ಯಪಾನ ಮಾಡದೇನೇ ತೇಲಾಡಿಕೊಂಡು ಹೋಗಬಹುದು.

ಈ ಒಂದು ಅದ್ಭುತವಾದ ರಸ್ತೆಯ ಉದ್ಘಾಟನೆಯಲ್ಲಿ ಬಣಕಲ್ ಸರ್ವ ಸದಸ್ಯರು ಭಾಗವಹಿಸಿ, ಈ ಒಂದು ಕಾರ್ಯಕ್ರಮವನ್ನು ನೀವು ಒಂದು ಬಾರಿ ಕಳೆದುಕೊಂಡರೆ ಮುಂದೆಂದು ವೀಕ್ಷಿಸಲು ಸಾಧ್ಯವಿಲ್ಲ ದಯವಿಟ್ಟು ಬೆಳಿಗ್ಗೆ 9 ಗಂಟೆಗೆ ಎಲ್ಲರೂ ಹಾಜರಾಗಿ ಎಂದು ಕರೆಯೋಲೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version