ಯುವಕನ ಹುಚ್ಚಾಟಕ್ಕೆ ಯುವತಿಯ ಬಾಳು ಹಾಳು: ಮದುವೆಯ ಮರುದಿನವೇ ವಧು ಮನೆಯಿಂದ ಹೊರಗೆ!

ಬೆಳಗಾವಿ: ಯುವಕನೋರ್ವ ಯುವತಿಗೆ ಪ್ರೀತಿಸಿ ಕೈಕೊಟ್ಟಿರುವುದೇ ಅಲ್ಲದೇ, ಆಕೆಗೆ ವಿವಾಹವಾದ ಬೆನ್ನಲ್ಲೇ ಮದುವೆಯನ್ನೇ ಮುರಿತು ಹಾಕಿರುವ ಅಮಾನವೀಯ ಘಟನೆಯೊಂದು ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.
ಕಿತ್ತೂರು ಪಟ್ಟಣದ ನೇಕಾರ ಕಾಲೋನಿ ನಿವಾಸಿ ಮುತ್ತುರಾಜ್ ಇಟಗಿ ಎಂಬಾತ ಪಕ್ಕದ ಮನೆಯ ಯುವತಿಯನ್ನು ಕಳೆದ 6 ವರ್ಷಗಳ ವರೆಗೆ ಪ್ರೀತಿಸಿದ್ದ. ಯುವತಿಯೊಂದಿಗೆ ದೈಹಿಕ ಸಂಬಂಧವನ್ನೂ ಬೆಳೆಸಿದ್ದು, ಇದನ್ನು ವಿಡಿಯೋ, ಫೋಟೋ ಕೂಡ ಮಾಡಿಕೊಂಡಿದ್ದ. ಇದಾದ ಬಳಿಕ ಮನೆಯವರು ಮದುವೆಗೆ ಒಪ್ಪುತ್ತಿಲ್ಲ, ನೀನು ಬೇರೆ ಮದುವೆಯಾಗು ಎಂದು ಹೇಳಿ ಯುವತಿಗೆ ಕೈಕೊಟ್ಟಿದ್ದಾನೆ.
ಹೀಗಾಗಿ ಯುವತಿ ಪೋಷಕರು ತೋರಿಸಿದ ಖಾನಾಪುರ ತಾಲೂಕಿನ ಯುವಕನ ಜೊತೆಗೆ ವಿವಾಹವಾಗಿದ್ದಳು. ಆದ್ರೆ ಮದುವೆಯ ಮರುದಿನವೇ ಮುತ್ತುರಾಜ್ ಇಟಗಿ ವರನ ಸಂಬಂಧಿಗೆ ಯುವತಿಯೊಂದಿಗಿನ ಖಾಸಗಿ ವಿಡಿಯೋ ಶೇರ್ ಮಾಡಿದ್ದಾನೆ. ಯುವತಿಯ ವಿಡಿಯೋ ನೋಡಿದ ವರ ನೀನು ನನಗೆ ಬೇಡ ಎಂದು ಮನೆಯಿಂದ ಹೊರ ಹಾಕಿದ್ದಾನೆ.
ಈ ಪ್ರಕರಣ ಎರಡು ಮೂರು ಸಲ ಯುವತಿ ಕಿತ್ತೂರು ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಪೊಲೀಸರು ಸಕಾರಾತ್ಮಕ ಸ್ಪಂದನೆ ನೀಡಿಲ್ಲ ಎನ್ನಲಾಗಿದೆ.
ತನ್ನ ಜೀವನವನ್ನು ಹಾಳು ಮಾಡಿದ ಮುತ್ತುರಾಜ್ ಮನೆಯ ಮುಂದೆ ಇದೀಗ ಯುವತಿ ಪ್ರತಿಭಟನೆ ನಡೆಸುತ್ತಿದ್ದಾಳೆ. ಯುವತಿ ಮನೆಗೆ ಬರುತ್ತಿದ್ದಂತೆಯೇ ಮುತ್ತುರಾಜ್ ನ ಮನೆಯವರು ಬಾಗಿಲು ಬಂದ್ ಮಾಡಿ ಮನೆಯೊಳಗೆ ಕುಳಿತಿದ್ದಾರೆ ಎನ್ನಲಾಗಿದೆ.
ಏನೇ ಆಗಲಿ ಯುವತಿಯ ಜೀವನವನ್ನು ಹಾಳು ಮಾಡಿ, ಯುವಕ ರಾಜಾರೋಷವಾಗಿ ಓಡಾಡುತ್ತಿರುವುದಂತೂ ಮಹಿಳಾ ಸುರಕ್ಷತೆಗೆ ಸವಾಲಿನ ವಿಚಾರವಾಗಿದೆ, ಪೊಲೀಸರು ಮಧ್ಯಪ್ರವೇಶಿಸಿ ಯುವತಿಗೆ ನ್ಯಾಯಕೊಡಿಸಬೇಕು ಅನ್ನೋ ಒತ್ತಾಯ ಇದೀಗ ಕೇಳಿ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth