1:53 PM Thursday 16 - October 2025

ಬೆಳ್ತಂಗಡಿ:  ಕ್ಯಾನ್ಸರ್ ಪೀಡಿತೆಯನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಗುಂಡಿ ತೆಗೆದ ನೆರೆಯ ಮನೆಯವರು

22/11/2020

ನೆಲ್ಯಾಡಿ: ಕ್ಯಾನ್ಸರ್ ಪೀಡಿತ ಮಹಿಳೆಯೊಬ್ಬರ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವ್ಯಕ್ತಿಯೋರ್ವ ಕಂದಕ ನಿರ್ಮಿಸಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಅರಸಿನಮಕ್ಕಿ ಪಂಚಾಯತ್ ವ್ಯಾಪ್ತಿಯ ಎಂಜಿರ ಎಂಬಲ್ಲಿ ಹೀಗೆ ರಸ್ತೆಗೆ ಕಂದಕ ನಿರ್ಮಿಸಲಾಗಿದ್ದು, ರೆಜಿ ಎಂಬವರು ಈ ರೀತಿಯ ಅಮಾನವೀಯತೆ ತೋರಿಸಿದ್ದಾರೆ ಎಂದು ವರದಿಯಾಗಿದೆ.

ರಾಷ್ಟ್ರೀಯ 75ರ ಸಮೀಪದ ಹೆದ್ದಾರಿ ಸಮೀಪ ಇರುವ ಕ್ಯಾನ್ಸರ್​ನಿಂದ ಬಳಲುತ್ತಿರುವ ಚಿನ್ನಮ್ಮ ಎಂಬುವರ ಮನೆಗೆ ತೆರಳುವ ದಾರಿಯಲ್ಲಿ ಸ್ಥಳೀಯ ನಿವಾಸಿ ರೆಜಿ ಎಂಬುವರು ಕಂದಕಗಳನ್ನು ನಿರ್ಮಿಸಿದ್ದು, ಹಲವಾರು ವರ್ಷಗಳಿಂದ ಇದ್ದ ಕಾಲು ದಾರಿಯನ್ನು ಕೂಡ ರೆಜಿ ಎಂಬವರು ಬಂದ್ ಮಾಡುವ ಮೂಲಕ ಕ್ಯಾನ್ಸರ್ ಪೀಡಿತೆಗೆ ತೊಂದರೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಶನಿವಾರ ಚಿನ್ನಮ್ಮ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಸಾಮಾಜಿಕ ಸಂಘಟನೆಯ ಸದಸ್ಯರು ಮಹಿಳೆಯನ್ನು ಚೇರ್ ಮೂಲಕ ಎತ್ತಿಕೊಂಡು ಕಂದಕ ದಾಟಿಸಿ ಕರೆದುಕೊಂಡು ಹೋಗಿದ್ದಾರೆ. ರೆಜಿ ಎಂಬವರು ಉದ್ದೇಶ ಪೂರ್ವಕವಾಗಿ ಕ್ಯಾನ್ಸರ್ ಪೀಡಿತೆಯ ಮನೆಗೆ ಹೋಗುವ ದಾರಿಯಲ್ಲಿಯೇ ತೆಂಗಿನ ಮರಕ್ಕೆ ಗುಂಡಿ ತೆಗೆದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಚಿನ್ನಮ್ಮ ಅವರನ್ನು ಆಸ್ಪತ್ರೆಗೆ ಕೊಂಡು ಹೋಗಲು ಸರಿಯಾದ ದಾರಿ ಕೂಡ ಇಲ್ಲ, ಹೀಗಾಗಿ ಸಾಮಾಜಿಕ ಸಂಘಟನೆಗಳು ಅವರನ್ನು ರಸ್ತೆ ವರೆಗೆ ಕೊಂಡೊಯ್ದು ಮಾನವೀಯತೆ ತೋರಿಸುತ್ತಿರುವ ಸಂದರ್ಭದಲ್ಲಿ ಸ್ಥಳೀಯ ಮನೆಯವರೇ ದಾರಿಯನ್ನು ಬಂದ್ ಮಾಡುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ. ಇಂತಹವರೆಲ್ಲ ಸಾಯುವುದೇ ಇಲ್ವಾ? ಇವರಿಗೆಲ್ಲ ರೋಗವೂ ಬರಲ್ವಾ? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಜೊತೆಗೆ ಇಂತಹವರ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ

Exit mobile version