10:26 AM Saturday 23 - August 2025

ದರ್ಶನ್ ಕೇಸ್: ವಿಚಾರಣೆ ಮುಗಿದರೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಾರೆ: ಗೃಹ ಸಚಿವ ಜಿ.ಪರಮೇಶ್ವರ

g parameshwar
21/06/2024

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ‌ ಪ್ರಕರಣದ ತನಿಖೆ ಪಕ್ಷದ ಆಧಾರದ ಮೇಲೆ ನಡೆಯುತ್ತಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಸ್ಪಷ್ಟಪಡಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ತಪ್ಪಿತಸ್ಥರು ಯಾವುದೇ ಪಕ್ಷದಲ್ಲಿದ್ದರು ತಪ್ಪಿತಸ್ಥರೇ ಆಗಿರುತ್ತಾರೆ. ಬೇರೆ ಪಕ್ಷದಲ್ಲಿದ್ದಾರೆ ಎಂಬುದನ್ನು ಮುಖ್ಯವಾಗಿ ತೆಗೆದುಕೊಳ್ಳುವುದಿಲ್ಲ. ಏನು ತಪ್ಪು ಮಾಡಿದ್ದಾರೆ ಎಂಬ ಆಧಾರದ ಮೇಲೆ ತನಿಖೆ, ವಿಚಾರಣೆ ನಡೆಯುತ್ತದೆ ಎಂದು ಹೇಳಿದರು.

ದರ್ಶನ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ನನ್ನು ವಿಚಾರಣೆ ನಡೆಸಲು ಇನ್ನೊಂದು ವಾರ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ‌ ಪೊಲೀಸರು ಕೇಳಿದ್ದರು. ಆದರೆ ಎರಡು ದಿನ ಕಸ್ಟಡಿಗೆ ನೀಡಿದೆ. ಎರಡು ದಿನದ ಬಳಿಕ ವಿಚಾರಣೆ ಮುಗಿದರೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಾರೆ ಎಂದು ತಿಳಿಸಿದರು‌.

ರೇಣುಕಾಸ್ವಾಮಿ ಪ್ರಕರಣದ ಕೊಲೆ ಆರೋಪ ಹೊತ್ತಿರುವ ನಟ ದರ್ಶನ್ ವಿಚಾರದಲ್ಲಿ ಯಾರು ನನ್ನ ಬಳಿ ಬರಬೇಡಿ ಎಂದು ಮುಖ್ಯಮಂತ್ರಿಯವರ ಸೂಚಿಸಿದ್ದಾರೆ‌ ಎಂಬುದರ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಅಧಿಕಾರಿಗಳು ಮಾಹಿತಿ ನೀಡಲು ಹೋಗುವುದನ್ನು ಹೊರತುಪಡಿಸಿ, ಯಾರು ಹೋಗಲ್ಲ. ಅದರ ಅವಶ್ಯಕತೆಯು ಯಾರಿಗೂ ಇಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾರು ನನ್ನ ಬಳಿ ಬಂದಿಲ್ಲ‌ ಎಂದು ಸ್ಪಷ್ಟಪಡಿಸಿದರು.

ಜೈಲಿನಲ್ಲಿ ದುಡ್ಡು ಎಲ್ಲ ಸೌಲಭ್ಯಗಳು ಸಿಗುತ್ತವೆ. ನಟ ದರ್ಶನ  ಜೈಲಿಗೆ ಬೇರೆ ರೀತಿಯಲ್ಲಿ ಟ್ರೀಟ್ ಮಾಡಲಾಗುತ್ತದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, ಕೆಲವು ಸಂದರ್ಭದಲ್ಲಿ ಸತ್ಯ ಇರಬಹುದು. ಜೈಲುಗಳ ಮೇಲೆ ದಾಳಿ ನಡೆದಾಗ ಫೋನ್ ಸೇರಿದಂತೆ ಬೇರೆಬೇರೆ ವಸ್ತುಗಳು ಸಿಕ್ಕಿವೆ. ಅಧಿಕಾರಿಗಳ ಕಣ್ತಪ್ಪಿಸಿ ನಡೆದಿರುತ್ತದೆ. ಜೈಲ್ ಅಧಿಕಾರಿಗಳು ನಿಗಾವಹಿಸುತ್ತಾರೆ. ಇಂತಹ ಘಟನೆಗಳಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿರುತ್ತದೆ‌ ಎಂದು ತಿಳಿಸಿದರು.

ರಾಹುಲ್ ಗಾಂಧಿ ಅವರ ವಿರುದ್ಧ ಎಕ್ಸ್‌  (ಟ್ವೀಟರ್) ಖಾತೆಯಲ್ಲಿ ವಿವಾಧಾತ್ಮಕ ಪೋಸ್ಟ್ ಮಾಡಿದ್ದ ವ್ಯಕ್ತಿಗೆ ನೋಟಿಸ್ ನೀಡಲು ತೆರಳಿದ್ದ ಹೈಗ್ರೌಂಡ್ ಠಾಣೆ ಪೊಲೀಸರಿಗೆ ಅಡ್ಡಿಪಡಿಸಿದ ವಿಚಾರದ ಕುರಿತು ಪ್ರತಿಕ್ರಿಯಿಸಿ, ಉತ್ತರ ಪ್ರದೇಶದ ನೋಯ್ಡಾಗೆ ಮಫ್ತಿಯಲ್ಲಿ ಹೋಗಿದ್ದರು. ಅಲ್ಲಿನ ಪೊಲೀಸರಿಗೆ ಮುಂಚಿತವಾಗಿ ತಿಳಿಸಬೇಕಿತ್ತು. ಅಲ್ಲಿಗೆ ಹೋದ ನಂತರ ತಿಳಿಸಿದ್ದಾರೆ. ಅಲ್ಲಿನ ಪೊಲೀಸರ ಸಹಾಯ ಪಡೆದು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗದೇ ಇದ್ದರೆ, ವಾರಂಟ್ ಜಾರಿ ಮಾಡಿ ಬಂಧಿಸುತ್ತಾರೆ‌ ಎಂದರು.

ಕರ್ನಾಟಕ ಸೇರಿದಂತೆ ಎಂಟು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ಕುರಿತ ವರಿದಿಗೆ ಸಮಿತಿ ರಚನೆಯ ಕುರಿರತು ಮಾತನಾಡಿ, ಕರ್ನಾಟಕದ ಬಗ್ಗೆ ಎಐಸಿಸಿ ಮಟ್ಟದಲ್ಲಿ ಬೇರೆಯೇ ನಿರೀಕ್ಷೆ ಇತ್ತು. 15ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಅವರು ಹೈಕಮಾಂಡ್‌ ಗೆ ತಿಳಿಸಿದ್ದರು. ಅದು ಆಗಲಿಲ್ಲ. ಯಾವ ಕಾರಣಕ್ಕಾಗಿ ಹೀಗಾಗಿದೆ. ನಮ್ಮ ಸರ್ಕಾರ ಇದ್ದಾಗಿಯೂ ಇಷ್ಟು ಸ್ಥಾನ ಕಡಿಮೆಯಾಗಿದೆಯಲ್ಲ ಎಂದು ನಿಖರವಾದ ಕಾರಣವನ್ನು ಕಂಡುಕೊಳ್ಳಬೇಕಿದೆ. ಫ್ಯಾಕ್ಟ್ ಫೈಂಡಿಂಗ್ ಆಧಾರದ ಮೇಲೆ ಕ್ರಮದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version