ಜೈಲಿನಿಂದ ಬಿಡುಗಡೆಯಾದ ಮರು ದಿನವೇ ಸಿಜೆಪಿ ನಾಯಕರಿಗೆ ದೆಹಲಿ ಪೊಲೀಸರಿಂದ ಸಮನ್ಸ್
ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರಿಗೆ ನ್ಯಾಯಾಂಗ ಬಂಧನದಿಂದ ಬಿಡುಗಡೆಯಾದ ಕೇವಲ ಒಂದು ದಿನದ ನಂತರ ದೆಹಲಿ ಪೊಲೀಸ್ ಅಪರಾಧ ವಿಭಾಗ (Crime Branch) ಸಮನ್ಸ್ ಜಾರಿ ಮಾಡಿದೆ. ಗುರುವಾರ ರಾಜೌರಿ ಗಾರ್ಡನ್ನಲ್ಲಿರುವ ಕ್ರೈಮ್ ಬ್ರಾಂಚ್ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ.
ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ನ್ಯಾಯಾಲಯವು ಇಬ್ಬರೂ ನಾಯಕರಿಂದ ವೈಯಕ್ತಿಕ ಮತ್ತು ಶ್ಯೂರಿಟಿ ಬಾಂಡ್ಗಳನ್ನು ಸ್ವೀಕರಿಸಿ, ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವುದಾಗಿ ನೀಡಿದ ಲಿಖಿತ ಭರವಸೆಯನ್ನು ದಾಖಲಿಸಿಕೊಂಡು ಅವರ ಬಿಡುಗಡೆಗೆ ಆದೇಶಿಸಿತ್ತು.
ವಿಚಾರಣೆ ಪೂರ್ಣಗೊಳ್ಳುವವರೆಗೆ ನಾಯಕರಿಬ್ಬರೂ ತಲಾ 50,000 ರೂಪಾಯಿಗಳ ವೈಯಕ್ತಿಕ ಮತ್ತು ಶ್ಯೂರಿಟಿ ಬಾಂಡ್ ಸಲ್ಲಿಸಬೇಕು ಹಾಗೂ ಪ್ರತಿ ವಿಚಾರಣೆಯ ದಿನಾಂಕದಂದು ಹಾಜರಾಗಬೇಕು ಎಂದು ಎಸ್ಇಎಂ ರಿತು ರಾಜ್ ನಿರ್ದೇಶಿಸಿದ್ದಾರೆ.
ಸಾರ್ವಜನಿಕ ಶಾಂತಿಗೆ ಧಕ್ಕೆ ತರುವುದಿಲ್ಲ ಎಂದು ಲಿಖಿತ ಭರವಸೆ ನೀಡಿರುವ ನಾಯಕರು, ಜಂತರ್ ಮಂತರ್ ಪ್ರದೇಶವನ್ನು ಕಾನೂನುಬದ್ಧವಾಗಿ ಪ್ರತಿಭಟನಾ ಸ್ಥಳವೆಂದು ಪುನಃ ಘೋಷಿಸುವವರೆಗೆ ಅಲ್ಲಿ ಯಾವುದೇ ಧರಣಿ ನಡೆಸುವುದಿಲ್ಲ ಮತ್ತು ಭವಿಷ್ಯದ ಎಲ್ಲಾ ಪ್ರತಿಭಟನೆಗಳನ್ನು ಸಂವಿಧಾನದ ಚೌಕಟ್ಟಿನಲ್ಲೇ ನಡೆಸುವುದಾಗಿ ತಿಳಿಸಿದ್ದಾರೆ.
ಶಾಂತಿ ಭಂಗದ ಆತಂಕ ವ್ಯಕ್ತಪಡಿಸಿದ್ದ ದೆಹಲಿ ಪೊಲೀಸರು, ನಾಯಕರ ಬಂಧನ ಅವಧಿಯನ್ನು ಮತ್ತೂ ಮೂರು ದಿನ ವಿಸ್ತರಿಸುವಂತೆ ಕೋರಿದ್ದರು. ಅಲ್ಲದೆ, ನ್ಯಾಯಾಲಯಕ್ಕೆ ನೀಡಿದ ಹೇಳಿಕೆಗಳು ಮತ್ತು ಮಾಧ್ಯಮಗಳಿಗೆ ನೀಡಿದ ಹೇಳಿಕೆಗಳ ನಡುವೆ ವ್ಯತ್ಯಾಸವಿದೆ ಎಂದು ಪೊಲೀಸರು ಬೆಟ್ಟು ಮಾಡಿದ್ದರು.
ಅಕ್ಟೋಬರ್ 13 ರಂದು ನಿಷೇಧಿತ ಜಂತರ್ ಮಂತರ್ ಪ್ರದೇಶದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಈ ಇಬ್ಬರೂ ನಾಯಕರನ್ನು ಬಂಧಿಸಲಾಗಿತ್ತು. ಖಾಸಗಿ ಆಸ್ತಿಗಳ ಮೂಲಕ ನಿಷೇಧಿತ ಪ್ರದೇಶ ಪ್ರವೇಶಿಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಇವರ ಮೇಲಿದೆ.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 23 ರಂದು ಮಧ್ಯಾಹ್ನ 3 ಗಂಟೆಗೆ ನಿಗದಿಪಡಿಸಲಾಗಿದ್ದು, ಸೌರವ್ ದಾಸ್, ಅಶುತೋಷ್ ರಾಂಕಾ ಮತ್ತು ಅವರ ಶ್ಯೂರಿಟಿಗಳು ಕೋರ್ಟ್ಗೆ ಹಾಜರಿರಬೇಕೆಂದು ನಿರ್ದೇಶಿಸಲಾಗಿದೆ.

























