ಹಬ್ಬದ ಹೆಸರಿನಲ್ಲಿ ನಡುರಾತ್ರಿ ಕಳೆದರೂ ಪಟಾಕಿ, ಡಿಜೆ ಸದ್ದು: ಪೊಲೀಸ್ ಆಯುಕ್ತರು, ಗೃಹ ಸಚಿವರಿಗೆ ನಟಿ ರಮ್ಯಾ ದೂರು
ಬೆಂಗಳೂರು: ಹಬ್ಬದ ಹೆಸರಿನಲ್ಲಿ ನಡುರಾತ್ರಿ ಪಟಾಕಿ ಸಿಡಿಸಿ ಮತ್ತು ಜೋರಾಗಿ ಹಾಡುಗಳನ್ನು ಹಾಕಿ ಸುತ್ತಲಿನ ವಾತಾವರಣವನ್ನು ಕೆಡಿಸಿರುವುದಕ್ಕೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ.
ಬೆಂಗಳೂರಿನ ಫನ್ ವರ್ಲ್ಡ್ ಆವರಣದಲ್ಲಿ ರಾತ್ರಿ ಸುಮಾರು ಮೂರು ಗಂಟೆಯಲ್ಲೂ ಪಟಾಕಿ ಸಿಡಿಸುವುದು ಮತ್ತು ಜೋರಾಗಿ ಸಂಗೀತ ನುಡಿಸುವುದು ಮುಂದುವರಿದಿತ್ತು ಎಂದು ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ ಆರು ಗಂಟೆಯವರೆಗೆ ಪಟಾಕಿ ಸಿಡಿಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ ಹಾಗೂ ವಿಶೇಷ ಅನುಮತಿ ಇದ್ದರೂ ಮಧ್ಯರಾತ್ರಿಯ ನಂತರ ಲೌಡ್ ಸ್ಪೀಕರ್ ಬಳಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.
ವಿಶೇಷ ಸಂದರ್ಭಗಳಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಲು ತಮ್ಮ ಅಭ್ಯಂತರವಿಲ್ಲವಾದರೂ, ಇಂತಹ ತಡರಾತ್ರಿಯ ಅಸಮಂಜಸ ಚಟುವಟಿಕೆಗಳು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಸುತ್ತಮುತ್ತ ಆಸ್ಪತ್ರೆಗಳಿದ್ದು, ಹಿರಿಯ ನಾಗರಿಕರು ಹಾಗೂ ಮಕ್ಕಳು ವಾಸಿಸುತ್ತಿದ್ದಾರೆ. ಇಂದು ಕೆಲಸದ ದಿನವಾಗಿದ್ದು ಶಾಲೆಗಳು ಕೂಡ ಪುನರಾರಂಭಗೊಂಡಿರುವುದರಿಂದ ಈ ಗದ್ದಲದಿಂದ ಅನೇಕ ಉದ್ಯೋಗಸ್ಥರು ಹಾಗೂ ಮಕ್ಕಳಿಗೆ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ.
ತಾನು ರಾತ್ರಿ ಎರಡೂವರೆ ಗಂಟೆಗೆ 112 ಸಂಖ್ಯೆಗೆ ಕರೆ ಮಾಡಿದ್ದಲ್ಲದೆ, ಪೊಲೀಸ್ ಆಯುಕ್ತರಿಗೆ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿರುವ ಅವರು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಭಾವಿಸುವುದಾಗಿ ತಿಳಿಸಿದ್ದಾರೆ.
ಇನ್ನು ಮುಂದೆ ಇಂತಹ ಮೆರವಣಿಗೆಗಳ ವೇಳೆ ಬೆಳಗ್ಗೆ ಆರು ಗಂಟೆಯವರೆಗೆ ಜೋರು ಧ್ವನಿಯಲ್ಲಿ ಚಲನಚಿತ್ರ ಹಾಡುಗಳನ್ನು ಹಾಡುವುದನ್ನು ಮತ್ತು ಪಟಾಕಿ ಸಿಡಿಸುವುದನ್ನು ದಯವಿಟ್ಟು ನಿಲ್ಲಿಸಬೇಕು ಎಂದು ಒತ್ತಾಯಿಸಿರುವ ನಟಿ ರಮ್ಯಾ, ನಾವೆಲ್ಲರೂ ಕಾನೂನನ್ನು ಗೌರವಿಸಬೇಕು ಎಂದು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಆಗ್ರಹಿಸಿದ್ದಾರೆ.

























