ಅಮೆರಿಕದ ಕರೆನ್ಸಿ ನೋಟುಗಳ ಮೇಲೆ ಡೊನಾಲ್ಡ್ ಟ್ರಂಪ್ ಸಹಿ: 165 ವರ್ಷಗಳ ಸಂಪ್ರದಾಯಕ್ಕೆ ಅಂತ್ಯ
ವಾಷಿಂಗ್ಟನ್: ಅಮೆರಿಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರದಲ್ಲಿರುವ ಅಧ್ಯಕ್ಷರೊಬ್ಬರ ಸಹಿ ಅಲ್ಲಿನ ಕರೆನ್ಸಿ ನೋಟುಗಳ (ಡಾಲರ್ ಬಿಲ್‌ಗಳು) ಮೇಲೆ ಕಾಣಿಸಿಕೊಳ್ಳಲಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಯನ್ನು ಅಮೆರಿಕದ ನೋಟುಗಳ ಮೇಲೆ ಮುದ್ರಿಸಲು ನಿರ್ಧರಿಸಲಾಗಿದ್ದು, ಈ ಮೂಲಕ 165 ವರ್ಷಗಳ ಸುದೀರ್ಘ ಸಂಪ್ರದಾಯವೊಂದು ಕೊನೆಗೊಳ್ಳಲಿದೆ.
1861ರಲ್ಲಿ ಅಮೆರಿಕದ ಕಾಗದದ ಹಣ ಚಲಾವಣೆಗೆ ಬಂದಾಗಿನಿಂದ, ನೋಟುಗಳ ಮೇಲೆ ಅಲ್ಲಿನ ‘ಟ್ರೆಷರರ್’ (Treasurer) ಸಹಿ ಇರುತ್ತಿತ್ತು. ಆದರೆ ಈಗ ಮೊದಲ ಬಾರಿಗೆ ಟ್ರೆಷರರ್ ಸಹಿಯನ್ನು ತೆಗೆದುಹಾಕಿ, ಅದರ ಬದಲಿಗೆ ಅಧ್ಯಕ್ಷ ಟ್ರಂಪ್ ಅವರ ಸಹಿಯನ್ನು ಸೇರಿಸಲಾಗುತ್ತಿದೆ.
ಹೊಸ ನೋಟುಗಳಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಖಜಾನೆ ಕಾರ್ಯದರ್ಶಿ (Treasury Secretary) ಸ್ಕಾಟ್ ಬೆಸೆಂಟ್ ಅವರ ಸಹಿ ಇರಲಿದೆ.
ಜೂನ್ ತಿಂಗಳಿನಿಂದ ಹೊಸ ಸಹಿಯುಳ್ಳ 100 ಡಾಲರ್ ನೋಟುಗಳು ಮೊದಲು ಮುದ್ರಣಗೊಳ್ಳಲಿವೆ. ಆನಂತರ ಹಂತಹಂತವಾಗಿ ಇತರ ಮುಖಬೆಲೆಯ ನೋಟುಗಳು ಚಲಾವಣೆಗೆ ಬರಲಿವೆ.
ಅಮೆರಿಕದ ಸ್ವಾತಂತ್ರ್ಯದ 250ನೇ ವಾರ್ಷಿಕೋತ್ಸವದ ನೆನಪಿಗಾಗಿ ಈ ಬದಲಾವಣೆ ಮಾಡಲಾಗುತ್ತಿದೆ ಎಂದು ಅಮೆರಿಕದ ಖಜಾನೆ ಇಲಾಖೆ ತಿಳಿಸಿದೆ. ದೇಶದ ಆರ್ಥಿಕ ಶಕ್ತಿ ಮತ್ತು ಸ್ಥಿರತೆಯನ್ನು ಸಂಕೇತಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ಟ್ರಂಪ್ ಅವರ ಚಿತ್ರವಿರುವ 24 ಕ್ಯಾರೆಟ್ ಚಿನ್ನದ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದ್ದು, ಈಗ ಕರೆನ್ಸಿ ನೋಟುಗಳ ಮೇಲೂ ಅವರ ಸಹಿ ಮೂಡಿಬರುತ್ತಿರುವುದು ವಿಶೇಷವಾಗಿದೆ. ಸಾಮಾನ್ಯವಾಗಿ ಜೀವಂತವಿರುವ ವ್ಯಕ್ತಿಗಳ ಚಿತ್ರ ಅಥವಾ ಸಹಿಯನ್ನು ಕರೆನ್ಸಿ ಮೇಲೆ ಬಳಸಬಾರದು ಎಂಬ ನಿಯಮವಿದ್ದರೂ, ಈ ವಿಶೇಷ ಸಂದರ್ಭಕ್ಕಾಗಿ ನಿಯಮ ಸಡಿಲಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























