ಶಾರ್ಟ್‌ಕಟ್ ನಲ್ಲಿ ಹೋಗಲು ನದಿಗೆ ಟ್ರ್ಯಾಕ್ಟರ್ ಇಳಿಸಿ ಚಾಲಕನಿಂದ ಹುಚ್ಚಾಟ: ಮೀನುಗಾರರಿಂದ ಭಕ್ತರ ಪ್ರಾಣ ರಕ್ಷಣೆ

27/03/2026

ಗದಗ/ವಿಜಯನಗರ: ಶಾರ್ಟ್‌ಕಟ್ (ಅಡ್ಡದಾರಿ) ಮೂಲಕ ನದಿ ದಾಟಲು ಹೋಗಿ ಭಕ್ತರಿದ್ದ ಟ್ರ್ಯಾಕ್ಟರ್ ಒಂದು ತುಂಗಭದ್ರಾ ನದಿಯ ಮಧ್ಯದಲ್ಲಿ ಸಿಲುಕಿ ಮುಳುಗಿದ ಘಟನೆ ನಡೆದಿದೆ. ಅದೃಷ್ಟವಶಾತ್ ಸಮಯಪ್ರಜ್ಞೆ ಮೆರೆದ ಸ್ಥಳೀಯ ಮೀನುಗಾರರು ನದಿಗೆ ಜಿಗಿದು ಟ್ರ್ಯಾಕ್ಟರ್‌ನಲ್ಲಿದ್ದ ಎಲ್ಲಾ ಭಕ್ತರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ನವಲಿ ಗ್ರಾಮದ ಭಕ್ತರು ಸಿಂಗಟಾಲೂರು ವೀರಭದ್ರೇಶ್ವರ ಜಾತ್ರೆಗೆ ತೆರಳುತ್ತಿದ್ದರು. ರಸ್ತೆಯ ಮೂಲಕ ಹೋದರೆ ತಡವಾಗಬಹುದು ಎಂಬ ಕಾರಣಕ್ಕೆ ಭಕ್ತರು ನದಿಯ ಮೂಲಕವೇ ಟ್ರ್ಯಾಕ್ಟರ್ ಚಲಾಯಿಸುವಂತೆ ಚಾಲಕನಿಗೆ ಒತ್ತಾಯಿಸಿದ್ದರು. ನೀರಿನ ಮಟ್ಟ ಕಡಿಮೆ ಇದೆ ಎಂದು ಭಾವಿಸಿ ಚಾಲಕ ಟ್ರ್ಯಾಕ್ಟರ್ ಅನ್ನು ನದಿಗೆ ಇಳಿಸಿದ್ದಾನೆ.

ಆದರೆ ನದಿಯ ಮಧ್ಯಭಾಗಕ್ಕೆ ತಲುಪುತ್ತಿದ್ದಂತೆ ಚಾಲಕನಿಗೆ ಹಾದಿ ತಪ್ಪಿದೆ, ಅಷ್ಟರಲ್ಲಿ ನೀರಿನ ಮಟ್ಟವೂ ಏರಿಕೆಯಾಗಿದೆ. ಟ್ರ್ಯಾಕ್ಟರ್ ಇಂಜಿನ್ ಮಟ್ಟಕ್ಕೆ ನೀರು ಬಂದಾಗ ಚಾಲಕನ ನಿಯಂತ್ರಣ ತಪ್ಪಿ ವಾಹನ ಮುಳುಗಲು ಪ್ರಾರಂಭಿಸಿದೆ. ಇದರಿಂದ ಗಾಬರಿಗೊಂಡ ಭಕ್ತರು ಕಿರುಚಾಡತೊಡಗಿದರು. ತಕ್ಷಣ ಕಾರ್ಯಪ್ರವೃತ್ತರಾದ ಹತ್ತಿರದಲ್ಲಿದ್ದ ಮೀನುಗಾರರು ಎಲ್ಲರನ್ನೂ ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಮುಳುಗಿದ್ದ ಟ್ರ್ಯಾಕ್ಟರ್ ಅನ್ನು ಕ್ರೇನ್ ಸಹಾಯದಿಂದ ಮೇಲೆತ್ತಲಾಯಿತು.

ಸೇತುವೆಯ ಮೂಲಕ ಹೋಗಲು ಅವಕಾಶವಿದ್ದರೂ, ಸಮಯ ಉಳಿಸುವ ಹಪಾಹಪಿಗೆ ಬಿದ್ದು ಇಂತಹ ಅಪಾಯಕಾರಿ ಸಾಹಸಕ್ಕೆ ಕೈಹಾಕಿದ್ದಕ್ಕೆ ಮೀನುಗಾರರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದೇವರು ನಮ್ಮನ್ನು ಕಾಪಾಡಿದ್ದಾನೆ, ಮೀನುಗಾರರ ಉಪಕಾರ ಮರೆಯಲು ಸಾಧ್ಯವಿಲ್ಲ” ಎಂದು ರಕ್ಷಿಸಲ್ಪಟ್ಟ ಭಕ್ತರು ಕೃತಜ್ಞತೆ ಸಲ್ಲಿಸಿದ್ದಾರೆ.

ನದಿಯ ನೀರಿನ ಹರಿವು ಅನಿಶ್ಚಿತವಾಗಿರುವುದರಿಂದ ಇಂತಹ ಅಪಾಯಕಾರಿ ಹಾದಿಗಳನ್ನು ಬಳಸದಂತೆ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version