ಅವೈಜ್ಞಾನಿಕ, ಅರೆಬೆಂದ ‘ಶಕ್ತಿ’ ಯೋಜನೆ ಎಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಗ್ಯಾರಂಟಿಗಳ ಅಡ್ಡ ಪರಿಣಾಮದ ತೀವ್ರತೆ ಜನರಿಗೆ ತಟ್ಟುತ್ತಿದೆ. ಅವೈಜ್ಞಾನಿಕ, ಅರೆಬೆಂದ ‘ಶಕ್ತಿ’ ಯೋಜನೆಯ ಫಲವಾಗಿ ಇವತ್ತು ಖಾಸಗಿ ಸಂಚಾರ ವ್ಯವಸ್ಥೆ ಬುಡಮೇಲಾಗಿದೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಖಾಸಗಿ ಸಾರಿಗೆ ಒಕ್ಕೂಟಗಳಿಂದ ಬೆಂಗಳೂರು ಬಂದ್ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕ್ಯಾಬ್, ಆಟೋ ಓಡಿಸಿಕೊಂಡು ಬದುಕುತ್ತಿದ್ದವರು ಬೀದಿ ಪಾಲಾಗಿದ್ದಾರೆ. ನಿತ್ಯದ ಬದುಕು ಸಾಗಿಸುವುದೇ ದುಸ್ತರ ಎನ್ನುವ ಸ್ಥಿತಿಯಲ್ಲಿ ಅವರಿದ್ದಾರೆ. ಇನ್ನು, ಸರಕಾರಿ ಸಾರಿಗೆಯಷ್ಟೇ ಉತ್ತಮವಾಗಿ ಸೇವೆ ಒದಗಿಸುತ್ತಿರುವ ಖಾಸಗಿ ಬಸ್ ಜಾಲವನ್ನು ಸರಕಾರ ಹಾಳು ಮಾಡಿದೆ ಎಂದು ಆರೋಪಿಸಿದರು.
ಅನೇಕರ ಬದುಕಿಗೆ ಗ್ಯಾರಂಟಿ ಇಲ್ಲದಂತೆ ಮಾಡಿದೆ. ಈ ಬಂದ್ ನಿಂದ ಸರಕಾರಿ ಸಾರಿಗೆಗೆ ಪರ್ಯಾಯವಾಗಿದ್ದ ಖಾಸಗಿ ಸಾರಿಗೆ ಜಾಲ ಸಂಪೂರ್ಣ ಸ್ಥಗಿತವಾಗಿದೆ. ಶಾಲಾ ಮಕ್ಕಳು, ಸಾರ್ವಜನಿಕರು, ವಿಮಾನ ನಿಲ್ದಾಣಕ್ಕೆ ತೆರಳುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣ್ಣು, ತರಕಾರಿ ಸೇರಿ ಅಗತ್ಯ ವಸ್ತುಗಳ ಸಾಗಣೆಯಲ್ಲಿ ವ್ಯತ್ಯಯ ಆಗಿದೆ ಎಂದು ಆರೋಪಿಸಿದ್ದಾರೆ.