ರಿಲೀಫ್: ಹಿಮಾಚಲದಲ್ಲಿ ಬಿಕ್ಕಟ್ಟು ನಿಯಂತ್ರಿಸುವಲ್ಲಿ ಸದ್ಯಕ್ಕೆ ಕಾಂಗ್ರೆಸ್ ಯಶಸ್ವಿ

ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರವು ಹಿಮಾಚಲ ಪ್ರದೇಶದಲ್ಲಿನ ಬಿಕ್ಕಟ್ಟನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ರಾಜ್ಯ ಬಜೆಟನ್ನು ಯಶಸ್ವಿಯಾಗಿ ಅಂಗೀಕರಿಸಿದ ನಂತರ ಹಿಮಾಚಲ ಪ್ರದೇಶ ವಿಧಾನಸಭೆಯನ್ನು ಅನಿರ್ದಿಷ್ಟವಾಗಿ ಮುಂದೂಡಿದ್ದರಿಂದ ಬಿಜೆಪಿ ಶಾಸಕರು ಒತ್ತಾಯಿಸಿದ ಅವಿಶ್ವಾಸ ಮತದ ಸಾಧ್ಯತೆಯನ್ನು ಸ್ಥಗಿತಗೊಳಿಸಿದೆ. ಈ ರೀತಿಯಾಗಿ ಸುಖು ಆಡಳಿತವು ತನ್ನ ಸ್ಥಾನವನ್ನು ಬಲಪಡಿಸಿದೆ. ಮುಂದಿನ ಮೂರು ತಿಂಗಳವರೆಗೆ ಯಾವುದೇ ತಕ್ಷಣದ ಬೆದರಿಕೆಯನ್ನು ಎದುರಿಸುವುದಿಲ್ಲ.
ವಿಶೇಷವೆಂದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಮುಖಂಡ ವಿಕ್ರಮಾದಿತ್ಯ ಸಿಂಗ್ ಅವರು ಪಕ್ಷದ ನಾಯಕರೊಂದಿಗಿನ ಮಾತುಕತೆ ಪೂರ್ಣಗೊಳ್ಳುವವರೆಗೆ ತಮ್ಮ ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಬುಧವಾರ ಸಂಜೆ ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ಸೇರಿದಂತೆ ತನ್ನ 15 ಶಾಸಕರನ್ನು ಅಮಾನತುಗೊಳಿಸುವುದರೊಂದಿಗೆ ಬಜೆಟ್ ಅಂಗೀಕಾರವನ್ನು ತಡೆಯಲು ಮತ ವಿಭಜನೆಗೆ ಬಿಜೆಪಿಯ ಪ್ರಯತ್ನಕ್ಕೆ ಅಡ್ಡಿಯುಂಟಾಯಿತು.
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ಒತ್ತಾಯಿಸಿದ್ದರೂ, ಬಜೆಟ್ ಅಂಗೀಕಾರಕ್ಕೂ ಮುನ್ನ ಸುಖ್ವಿಂದರ್ ಸಿಂಗ್ ಸುಖು ಅವರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಊಹಾಪೋಹಗಳನ್ನು ತಳ್ಳಿಹಾಕಿದರು.
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಅಡ್ಡ ಮತದಾನ ಮಾಡಿದ ಪಕ್ಷದ ಆರು ಶಾಸಕರ ವಿರುದ್ಧ ಕಾಂಗ್ರೆಸ್ ಅನರ್ಹತೆ ನಿರ್ಣಯವನ್ನು ಪ್ರಾರಂಭಿಸಿತ್ತು. ಹಿಮಾಚಲ ಪ್ರದೇಶ ವಿಧಾನಸಭಾ ಸ್ಪೀಕರ್ ಈ ಬಗ್ಗೆ ತಮ್ಮ ಆದೇಶವನ್ನು ಕಾಯ್ದಿರಿಸಿದ್ದಾರೆ. ಏತನ್ಮಧ್ಯೆ, ಆರು ಶಾಸಕರ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನರ್ಹತೆ ಅರ್ಜಿಗಳಿಗೆ ಉತ್ತರಿಸಲು ಸಮಯ ಕೋರಿದ್ದಾರೆ.
ಭಿನ್ನಮತ ಸ್ಫೋಟ ಹಾಗೂ ಬಿಜೆಪಿಯ ಆಪರೇಷನ್ ಕಮಲದ ತಂತ್ರದಿಂದಾಗಿ ಹಿಮಾಚಲ ಪ್ರದೇಶ ಸರ್ಕಾರವನ್ನು ಉಳಿಸುವ ಜವಾಬ್ದಾರಿಯನ್ನು ಕರ್ನಾಟಕ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಹೆಗಲಿಗೆ ನೀಡಲಾಗಿತ್ತು. ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ ಇಂದು ಹಿಮಾಚಲ ಪ್ರದೇಶಕ್ಕೆ ತೆರಳಿದ್ದರು.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದ ಡಿಕೆಶಿ, ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನಗಳಂತೆ ಹಿಮಾಚಲ ಪ್ರದೇಶಕ್ಕೆ ತೆರಳುತ್ತಿದ್ದೇನೆ. ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರು ಪಕ್ಷಕ್ಕೆ ನಿಷ್ಠರಾಗಿರುವ ಬಗ್ಗೆ ನನಗೆ ಆತ್ಮವಿಶ್ವಾಸವಿದೆ. ಅವರಿಗೆ ನೀಡಲಾದ ಜನಾದೇಶವನ್ನು ಉಳಿಸಿಕೊಳ್ಳುತ್ತಾರೆ” ಎಂದು ತಿಳಿಸಿದ್ದರು.
“ಆದಾಗ್ಯೂ ಅಧಿಕಾರವನ್ನು ಕಿತ್ತುಕೊಳ್ಳಲು ಪ್ರಜಾಪ್ರಭುತ್ವವನ್ನು ಹಾಗೂ ಜನಾದೇಶ ಪ್ರಕ್ರಿಯೆಯನ್ನು ನಾಶಗೊಳಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸಲು ಬಿಜೆಪಿ ಯಾವ ಅತಿರೇಕಕಕ್ಕೆ ಹೋಗುತ್ತದೆ ಎಂಬುದನ್ನು ಪ್ರಶ್ನಿಸಬೇಕಾಗಿದೆ ಮತ್ತು ಆತಂಕಕಾರಿಯಾಗಿದೆ” ಎಂದು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth