ಜುಲೈ 16ರಂದು ಯೆಮೆನ್ ನಲ್ಲಿ ಕೇರಳದ ನರ್ಸ್ ಗೆ ಮರಣದಂಡನೆ!

ತಿರುವನಂತಪುರಂ(Mahanayaka): ಕೇರಳದ ನರ್ಸ್ ನಿಮಿಷಾ ಪ್ರಿಯಾ(Nimisha Priya) ಅವರನ್ನು ಯೆಮೆನ್ ನಲ್ಲಿ ಜುಲೈ 16ರಂದು ಗಲ್ಲಿಗೇರಿಸಲಾಗುವುದು ಎಂದು ನಿಮಿಷಾ ಪ್ರಿಯಾ ತಾಯಿ ಪ್ರೇಮಾ ಕುಮಾರಿ ಅವರ ಪವರ್ ಆಫ್ ಅಟಾರ್ನಿ ಹೊಂದಿರುವ ಮಾನವ ಹಕ್ಕುಗಳ ಕಾರ್ಯಕರ್ತ ಸಂಧಾನಕಾರ ಸ್ಯಾಮ್ಯುಯೆಲ್ ಜೆರೋಮ್ ಹೇಳಿದ್ದಾರೆ.
ಯೆಮೆನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಕೇರಳದ ಪಾಲಕ್ಕಾಡ್ ನ ನರ್ಸ್ ನಿಮಿಷ ಪ್ರಿಯಾ ಅವರನ್ನು ಜು.16ರಂದು ಗಲ್ಲಿಗೇರಿಸಲಾಗುವುದು ಎನ್ನುವ ವಿಚಾರವನ್ನು ಜೈಲು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸ್ಯಾಮ್ಯುಯೆಲ್ ಜೆರೋಮ್ ತಿಳಿಸಿದ್ದಾರೆ.
ಏನಿದು ಘಟನೆ?:
2011ರಲ್ಲಿ ಉದ್ಯೋಗ ಹರಸಿ ಯೆಮೆನ್ ಗೆ ತೆರಳಿದ್ದ ನಿಮಿಷ ಪ್ರಿಯಾ, ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹ್ದಿ(Talal Abdo Mahdi) ಅವರ ಪ್ರಾಯೋಜಕತ್ವದಲ್ಲಿ 2015ರಲ್ಲಿ ಸನಾದಲ್ಲಿ ಕ್ಲಿನಿಕ್ ತೆರೆದಿದ್ದರು. ಆದರೆ ಇದರಿಂದ ಆರ್ಥಿಕ ತೊಂದರೆ ಅನುಭವಿಸಿದಾಗ ಪತಿ ಮತ್ತು ಮಗು 2014ರಲ್ಲಿ ಭಾರತಕ್ಕೆ ಮರಳಿದ್ದರು. ತಲಾಲ್, ನಿಮಿಷಾಳನ್ನು ಮದುವೆಯಾಗಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ನಿರಂತರ ದೈಹಿಕ ಮಾನಸಿಕ ಹಿಂಸೆ ನೀಡಿದ್ದು, ಆಕೆಯ ಪಾಸ್ ಪೋರ್ಟ್ ನ್ನು ತನ್ನ ವಶದಲ್ಲಿಟ್ಟುಕೊಂಡು ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದಾನೆ ಎನ್ನಲಾಗಿದೆ. ತನ್ನ ಪಾಸ್ ಪೋರ್ಟ್ ಪಡೆದುಕೊಳ್ಳಲು ನಿಮಿಷಾ, ತಲಾಲ್ ಗೆ ಅರವಳಿಕೆ ಮದ್ದು ನೀಡಿದ್ದಳು. ಔಷಧಿಯಲ್ಲಿ ಏರುಪೇರಾಗಿರುವ ಪರಿಣಾಮ ತಲಾಲ್ ಮೃತಪಟ್ಟಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಜುಲೈ 2017ರಂದು ನಿಮಿಷಾ ಅವರನ್ನು ಬಂಧಿಸಿ, ತಲಾಲ್ ಕೊಲೆ ಆರೋಪ ಹೊರಿಸಲಾಗಿತ್ತು. 2020ರಲ್ಲಿ ಯೆಮೆನ್ ನ್ಯಾಯಾಲಯ ನಿಮಿಷಾಗೆ ಮರಣದಂಡನೆ ವಿಧಿಸಿತ್ತು. ನಿಮಿಷ ನ್ಯಾಯಾಲಯಗಳಿಗೆ ಮಾಡಿದ ಮೇಲ್ಮನವಿಗಳಿಗೆ ಯಾವುದೇ ಮನ್ನಣೆ ನೀಡಲಾಗಿಲ್ಲ. ಸದ್ಯ ಆಕೆಯ ಭವಿಷ್ಯ ರಾಜತಾಂತ್ರಿಕ ಮಾತುಕತೆ ಮತ್ತು ತಲಾಲ್ ಕುಟುಂಬದ ಕ್ಷಮಾದಾನದ ಮೇಲೆ ಅವಲಂಬಿತವಾಗಿದೆ.
ತಲಾಲ್ ನ ಕುಟುಂಬಸ್ಥರನ್ನು ನಿಮಿಷಾ ಪ್ರಿಯಾ ಕುಟುಂಬಸ್ಥರು ಸಂಪರ್ಕಿಸುವ ಪ್ರಯತ್ನದಲ್ಲಿದ್ದಾರೆ. ಆದರೆ ಅವರಿಂದ ಕ್ಷಮಾದಾನ ಸಿಗುವುದು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಈಗಾಗಲೇ ತಲಾಲ್ ಕುಟುಂಬಸ್ಥರು ಭಾರೀ ಪರಿಹಾರಕ್ಕಾಗಿ ಬೇಡಿಕೆಯಿಟ್ಟಿದ್ದಾರೆ. ಬರೋಬ್ಬರಿ 1 ಮಿಲಿಯನ್ ಡಾಲರ್ (8.57 ಕೋಟಿ ರೂಪಾಯಿ)ಗೆ ಬೇಡಿಕೆಯಿಡಲಾಗಿದೆ. ಹಣ ಸಂಗ್ರಹಿಸುವ ಕೆಲಸ ಕೂಡ ಈಗ ನಡೆಯುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD