ರಾಜ್ಯವನ್ನು ಬೆಚ್ಚಿಬೀಳಿಸಿದ ಮತ್ತೊಂದು ಮರ್ಯಾದೆಗೇಡು ಹತ್ಯೆ: ತಂಗಿ ಗರ್ಭಿಣಿಯಾಗಿದ್ದಕ್ಕೆ ಇಡೀ ಕುಟುಂಬವನ್ನೇ ಮುಗಿಸಿದ ಪಾಪಿ!
ವಿಜಯನಗರ: ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದಿದ್ದ ಭೀಕರ ತ್ರಿವಳಿ ಕೊಲೆ ಪ್ರಕರಣದ ಅಸಲಿ ಕಾರಣ ಈಗ ಬಯಲಾಗಿದ್ದು, ಇದು ಮರ್ಯಾದಾ ಹತ್ಯೆ ಎಂಬ ಆಘಾತಕಾರಿ ಸತ್ಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತನ್ನ ತಂಗಿ ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ಗರ್ಭಿಣಿಯಾದ ವಿಷಯ ತಿಳಿದ ಅಣ್ಣ ಅಕ್ಷಯ್, ಆಕ್ರೋಶಗೊಂಡು ತಂದೆ, ತಾಯಿ ಹಾಗೂ ತಂಗಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಪ್ರಕರಣದ ಹಿನ್ನೆಲೆ: ಆರೋಪಿ ಅಕ್ಷಯ್‌ನ ತಂಗಿ ಅಮೃತ (18) ಪಿಯುಸಿ ಓದುತ್ತಿದ್ದ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಈ ವಿಷಯ ಕಳೆದ ನಾಲ್ಕು ತಿಂಗಳ ಹಿಂದೆಯೇ ಅಕ್ಷಯ್ ಗೆ ತಿಳಿದು ಮನೆಯಲ್ಲಿ ಗಲಾಟೆಯಾಗಿತ್ತು. ಆದರೆ ಇತ್ತೀಚೆಗೆ ಅಮೃತ ಮೂರು ತಿಂಗಳ ಗರ್ಭಿಣಿ ಎಂಬ ವಿಷಯ ತಿಳಿದಾಗ ಅಕ್ಷಯ್ ನ ಕೋಪ ನೆತ್ತಿಗೇರಿದೆ. ಗರ್ಭಪಾತ ಮಾಡಿಸಲು ಅಕ್ಷಯ್ ಒತ್ತಾಯಿಸಿದ್ದರೂ, ತಂದೆ–ತಾಯಿ ಅದಕ್ಕೆ ಒಪ್ಪದಿದ್ದಾಗ ಇಡೀ ಕುಟುಂಬವನ್ನೇ ಮುಗಿಸಲು ಆತ ಸಂಚು ರೂಪಿಸಿದ್ದಾನೆ.
ಜನೆವರಿ 26: ಅಕ್ಷಯ್ ಮೊದಲು ತನ್ನ ತಾಯಿಯನ್ನು ಕೊಂದಿದ್ದಾನೆ. ನಂತರ ಸಂಜೆ ಮನೆಗೆ ಬಂದ ತಂಗಿಯನ್ನು ಹತ್ಯೆ ಮಾಡಿ ಇಬ್ಬರ ಶವಗಳನ್ನು ಪಕ್ಕದಲ್ಲೇ ಇರಿಸಿದ್ದಾನೆ. ರಾತ್ರಿ 10:30ಕ್ಕೆ ಮನೆಗೆ ಬಂದ ತಂದೆಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ.
ಸಾಕ್ಷಿ ನಾಶಕ್ಕೆ ಯತ್ನ: ಮೂವರನ್ನು ಕೊಂದ ನಂತರ ಅಕ್ಷಯ್ ಬೆಂಗಳೂರಿಗೆ ಬಂದು, ತಾನು ಅಲ್ಲೇ ಇದ್ದೇನೆ ಎಂದು ತೋರಿಸಿಕೊಳ್ಳಲು ನಾಟಕವಾಡಿದ್ದಾನೆ. ಬಳಿಕ ತನ್ನ ಮಾವ ವಸಂತನ ಸಹಾಯದೊಂದಿಗೆ ಮರಳಿ ಕೊಟ್ಟೂರಿಗೆ ಬಂದು, ಮನೆಯಲ್ಲೇ 5 ಅಡಿ ಗುಂಡಿ ತೋಡಿ ಮೂವರ ಶವಗಳನ್ನು ಹೂತು ಹಾಕಿದ್ದಾನೆ.
ಬಯಲಾದ ನಾಟಕ: ಶವಗಳನ್ನು ಹೂತ ನಂತರ ಯಾವುದೂ ತಿಳಿಯದವನಂತೆ ಅಕ್ಷಯ್ ಪೊಲೀಸರಿಗೆ ತನ್ನ ಕುಟುಂಬದವರು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದ. ಆದರೆ ಬೆಂಗಳೂರಿನ ಪೊಲೀಸರಿಗೆ ಆತನ ನಡವಳಿಕೆಯ ಮೇಲೆ ಅನುಮಾನ ಬಂದು ತೀವ್ರ ವಿಚಾರಣೆ ನಡೆಸಿದಾಗ ಈ ಭೀಕರ ಹತ್ಯಾಕಾಂಡ ಬೆಳಕಿಗೆ ಬಂದಿದೆ.
ಸದ್ಯ ಪೊಲೀಸರು ಆರೋಪಿ ಅಕ್ಷಯ್ ಮತ್ತು ಆತನಿಗೆ ಸಾಕ್ಷಿ ನಾಶಕ್ಕೆ ಸಾಥ್ ನೀಡಿದ ಮಾವ ವಸಂತನನ್ನು ಬಂಧಿಸಿದ್ದಾರೆ. ತಂಗಿ ಅಪ್ರಾಪ್ತೆಯಾಗಿದ್ದರೆ ಪ್ರಿಯತಮನ ವಿರುದ್ಧವೂ ಪೋಕ್ಸೋ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























