9:24 AM Thursday 11 - December 2025

ನಿತೀಶ್ ಕುಮಾರ್ ‘ಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯೇ..? ಆರ್ ಜೆಡಿ ಪಕ್ಷ ಹೇಳೋದೇನು..?

29/09/2023

‘ಇಂಡಿಯಾ’ ಎಂಬ ವಿರೋಧ ಪಕ್ಷಗಳ ಮೈತ್ರಿಕೂಟ ರಚನೆಯಾದ ನಂತರ ಪ್ರಧಾನಮಂತ್ರಿ ರೇಸ್ ನಲ್ಲಿ ಎರಡೆರಡು ಹೆಸರುಗಳು ಕೇಳಿಬಂದಿತ್ತು. ಇದೀಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಆಗ್ರಹಿಸುತ್ತಿರುವ ಜೆಡಿ(ಯು) ನಾಯಕರ ಆಗ್ರಹಕ್ಕೆ ಈಗ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ಸಹ ಧ್ವನಿಗೂಡಿಸಿದೆ.

ಆರ್‌ಜೆಡಿ ಹಿರಿಯ ನಾಯಕ ಮತ್ತು ಪಕ್ಷದ ಶಾಸಕ ಭಾಯಿ ವೀರೇಂದ್ರ ಅವರು, ನಿತೀಶ್ ಕುಮಾರ್ ಅತ್ಯಂತ ಅರ್ಹ ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ. ಬಿಹಾರದ ಜನತೆ ಅವರನ್ನು ಪ್ರಧಾನಿ ಹುದ್ದೆಯಲ್ಲಿ ನೋಡಲು ಬಯಸುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ಈ ಕುರಿತು ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಮಾತನಾಡಿ, ದೇಶದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಬಿಹಾರದವರು. ಹೀಗಾಗಿ ಜನ ಮುಂದಿನ ಪ್ರಧಾನಿ ರಾಜ್ಯದವರೇ ಆಗಬೇಕೆಂದು ಬಯಸಿದ್ದಾರೆ ಎಂದಿದ್ದಾರೆ.
ಇಂದು ಪಾಟ್ನಾದ ಫುಲ್ವಾರಿ ಶರೀಫ್‌ನಲ್ಲಿರುವ ದರ್ಗಾವೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರು ನಿತೀಶ್ ಕುಮಾರ್ ಪ್ರಧಾನಿಯಾಗಬೇಕೆಂದು ಪ್ರಾರ್ಥಿಸಿದ ಘಟನೆಯನ್ನು ಉಲ್ಲೇಖಿಸಿದ ತಿವಾರಿ, “ಅವರಿಗೆ ಎಲ್ಲಾ ಧರ್ಮಗಳ ಬಗ್ಗೆ ಗೌರವವಿದೆ” ಎಂದು ಹೇಳಿದರು.

ಇತ್ತೀಚೆಗಷ್ಟೇ, ಜೆಡಿಯು ಹಿರಿಯ ನಾಯಕ ಮತ್ತು ಬಿಹಾರ ವಿಧಾನಸಭೆ ಉಪ ಸ್ಪೀಕರ್ ಮಹೇಶ್ವರ್ ಹಜಾರಿ ಅವರು, “ಸಿಎಂ ನಿತೀಶ್ ಕುಮಾರ್ ಅವರು ಪ್ರಧಾನಿ ಹುದ್ದೆಗೆ ಅತ್ಯಂತ ಅರ್ಹ ಅಭ್ಯರ್ಥಿಯಾಗಿದ್ದಾರೆ. ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿದಾಗ ಅದು ನಿತೀಶ್ ಅವರ ಹೆಸರಾಗಿರುತ್ತದೆ ಎಂದಿದ್ದರು. ಜೊತೆಗೆ ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ ಮತ್ತು ಹಿರಿಯ ಜೆಡಿಯು ಸಚಿವ ಲೇಶಿ ಸಿಂಗ್ ಕೂಡಾ ನಿತೀಶ್ ಕುಮಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version