10:06 PM Tuesday 3 - February 2026

‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ: ಸಾಮಾಜಿಕ ಪರಿವರ್ತನೆಗೆ ಸಿನಿಮಾ ಪೂರಕ ಎಂದ ಸಿಎಂ ಸಿದ್ದರಾಮಯ್ಯ

landlord kannada movie
03/02/2026

ಬೆಂಗಳೂರು: ಸಾಮಾಜಿಕ ಅಸಮಾನತೆ ಹಾಗೂ ಜಾತಿಯಾಧಾರಿತ ಶೋಷಣೆಯ ವಿರುದ್ಧ ಧ್ವನಿ ಎತ್ತಿರುವ ನಟ ದುನಿಯಾ ವಿಜಯ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿಗಳು, ಸಮಾಜದಲ್ಲಿ ಮೌಲ್ಯಯುತ ಸಂದೇಶಗಳನ್ನು ಬಿತ್ತಲು ಮತ್ತು ಸಾರ್ವತ್ರಿಕ ಅಭಿಪ್ರಾಯ ಮೂಡಿಸಲು ಸಿನಿಮಾ ಅತ್ಯಂತ ಪ್ರಬಲ ಮಾಧ್ಯಮವಾಗಿದೆ. ಸಾಮಾಜಿಕ ಅಸಮಾನತೆ ಮತ್ತು ಜಾತಿ ಪದ್ಧತಿಯಂತಹ ಪಿಡುಗುಗಳ ವಿರುದ್ಧ ಬೆಳಕು ಚೆಲ್ಲುವ ಚಿತ್ರಗಳಿಗೆ ಬೆಂಬಲ ನೀಡುವುದು ಸರ್ಕಾರದ ನೈತಿಕ ಜವಾಬ್ದಾರಿ ಎಂದು ತಿಳಿಸಿದ್ದಾರೆ.

ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಿನಿಮಾಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮ ಎನ್ನುವುದು ನನ್ನ ಭಾವನೆ. ಸಾಮಾಜಿಕ ಕಳಕಳಿಯ ಸಿನೆಮಾವನ್ನು ಮಾಡಿದಾಗ ಅಂಥವರ ಜೊತೆ ನಿಂತು ಬೆನ್ನು ತಟ್ಟಬೇಕಿರುವುದು ಸರ್ಕಾರದ ನೈತಿಕ ಹೊಣೆ. ಈ ನಿಟ್ಟಿನಲ್ಲಿ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಸೂಚಿಸಲಾಗಿದೆ ಅಂತಾ ಅವರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆಯ ನೈಜ ಸ್ಥಿತಿಯನ್ನು ಬಿಂಬಿಸುವ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಇಂತಹ ಮತ್ತಷ್ಟು ಚಿತ್ರಗಳು ಮೂಡಿಬರಲು ಈ ನಿರ್ಧಾರ ಸ್ಪೂರ್ತಿಯಾಗಲಿದೆ ಎಂದು ಅವರು ಆಶಿಸಿದ್ದಾರೆ.

ದುನಿಯಾ ವಿಜಯ್ ಅವರ ವಿಭಿನ್ನ ನಟನೆಯ ಈ ಚಿತ್ರವು ಈಗಾಗಲೇ ಸಮಾಜದಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದು, ಸರ್ಕಾರದ ಈ ನಿರ್ಧಾರದಿಂದ ಹೆಚ್ಚಿನ ಸಂಖ್ಯೆಯ ಜನರನ್ನು ತಲುಪಲು ಚಿತ್ರತಂಡಕ್ಕೆ ಸಹಕಾರಿಯಾಗಲಿದೆ. ಸಾಮಾಜಿಕ ನ್ಯಾಯದ ಪರವಾಗಿ ನಿಲ್ಲುವ ಇಂತಹ ಸಿನೆಮಾಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಿದ್ದರಾಮಯ್ಯ ಸರ್ಕಾರವು ಕಲೆ ಮತ್ತು ಸಾಮಾಜಿಕ ಕಾಳಜಿಗೆ ತನ್ನ ಬೆಂಬಲ ವ್ಯಕ್ತಪಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version