ಚಿರತೆ ದಾಳಿಗೆ ಬಾಲಕಿ ಬಲಿ: ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ಹೊಸ ನಿಯಮ ಜಾರಿ

14/08/2023

ತಿರುಮಲ ಅಲಿಪಿರಿ ಮಾರ್ಗದಲ್ಲಿ ಚಿರತೆ ದಾಳಿಗೆ ಬಾಲಕಿ ಸಾವನ್ನಪ್ಪಿದ್ದಾಳೆ. ಈ ಪ್ರಕರಣದ ಬೆನ್ನಲ್ಲೇ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಮಕ್ಕಳೊಂದಿಗೆ ಬೆಟ್ಟ ಹತ್ತುವ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಹೊಸ ನಿಯಮವನ್ನು ಪ್ರಕಟಿಸಿದೆ.

ಚಿರತೆ ದಾಳಿಗೆ ಆರು ವರ್ಷದ ಮಗು ಲಕ್ಷಿತ ಬಲಿಯಾದ ಪ್ರಕರಣದ ನಂತರ ಪೊಲೀಸರು ಬೆಟ್ಟ ಹತ್ತಲು ಮಕ್ಕಳನ್ನು ಕರೆದುಕೊಂಡು ಹೋಗುವ ಸಮಯದಲ್ಲಿ ಬದಲಾವಣೆ ಮಾಡಿದ್ದಾರೆ. ಇದಕ್ಕಾಗಿ ಅಲಿಪಿರಿ ಹಾಗೂ ತಿರುಮಲ ನಡುವಿನ 7ನೇ ಮೈಲಿಯಲ್ಲಿ ಪೊಲೀಸ್ ಚೌಕಿಗಳನ್ನು ತೆರೆಯಲಾಗಿದೆ. ಇಲ್ಲಿ ಮಕ್ಕಳು ಹಾಗೂ ಶಿಶುಗಳ ಕೈಗೆ ಭದ್ರತಾ ಟ್ಯಾಗ್‌ ಅನ್ನು ಕಟ್ಟಿ ಕಳುಹಿಸಲಾಗುತ್ತಿದೆ. ಜತೆಗೆ 15 ವರ್ಷದೊಳಗಿನ ಮಕ್ಕಳನ್ನು ಬೆಟ್ಟ ಹತ್ತಲು ಕರೆದುಕೊಂಡು ಹೋಗುವವರಿಗೆ ಬೆಳಿಗ್ಗೆ 5ರಿಂದ ಮಧ್ಯಾಹ್ನ 2ರ ವರೆಗೆ ಮಾತ್ರ ಸಮಯ ನಿಗದಿ ಮಾಡಿದೆ. ಜತೆಗೆ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ದ್ವಿಚಕ್ರ ವಾಹನಗಳಿಗೆ ಘಾಟಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ತಿರುಮಲ ಬೆಟ್ಟದ ಐದು ಕಡೆ ಚಿರತೆಗಳ ಚಲನವಲನ ಕಂಡುಬಂದಿದೆ. ಇವುಗಳಲ್ಲಿ ಮೂರು ಚಿರತೆಗಳು ಅಲಿಪಿರಿ ಹಾಗೂ ಘಾಟಿಯ 38ನೇ ತಿರುವಿನಲ್ಲಿರುವ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ ಇರುವ ಗಾಳಿಗೋಪುರಂ ಬಳಿ ಕಾಣಿಸಿಕೊಂಡಿವೆ. ಘಾಟಿಯ ಕೆಳ ಭಾಗದಲ್ಲೂ ಭಾನುವಾರ ಬೆಳಿಗ್ಗೆ 6.30ರ ಸುಮಾರಿಗೆ ಚಿರತೆ ಕಂಡುಬಂದಿತ್ತು. ಚಿರತೆಯ ಚಲನವಲನ ಬೆಳಿಗ್ಗೆ 5ರಿಂದ 8 ಗಂಟೆಯವರೆಗೆ ಹೆಚ್ಚಾಗಿದೆ. ಎಚ್ಚರ ವಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಲಾಗಿದೆ. ಬೆಟ್ಟ ಹತ್ತುವ ಮಾರ್ಗದ ಮೆಟ್ಟಿಲುಗಳ ಮೇಲೂ ಚಿರತೆ ಓಡಾಡಿದ್ದನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುತಿಸಿದ್ದಾರೆ. ಇವುಗಳನ್ನು ಓಡಿಸಲು ಪಟಾಕಿಗಳನ್ನು ಸಿಡಿಸಲಾಗಿದೆ ಎಂದು ಟಿಟಿಡಿ ವಿಚಕ್ಷಣದಳ ಸಿಬ್ಬಂದಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version