ಭೀಕರ ಕೃತ್ಯ: ಉತ್ತರಪ್ರದೇಶದಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಲೆ; ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಕ್ರೂರಿಗಳು

ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ 40 ವರ್ಷದ ದಲಿತ ಮಹಿಳೆಯನ್ನು ಅತ್ಯಾಚಾರ ಮಾಡಿದ ನಂತರ ಕೊಲೆ ಮಾಡಿ ಆಕೆಯ ದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿದ ಅಮಾನವೀಯ, ಕ್ರೂರ ಘಟನೆ ನಡೆದಿದೆ.
ಮಹಿಳೆ ರಾಜ್ ಕುಮಾರ್ ಶುಕ್ಲಾ ಅವರ ಹಿಟ್ಟಿನ ಗಿರಣಿಯನ್ನು ಸ್ವಚ್ಛಗೊಳಿಸಲು ಅವರ ಮನೆಗೆ ಹೋಗಿದ್ದರು. ಆಕೆಯ 20 ವರ್ಷದ ಮಗಳು ಅಲ್ಲಿಗೆ ತಲುಪಿದಾಗ, ಒಳಗಿನಿಂದ ಬೀಗ ಹಾಕಿದ ಕೋಣೆಯಿಂದ ತಾಯಿಯ ಕಿರುಚಾಟ ಕೇಳಿಸಿತು ಎಂದು ಸ್ಟೇಷನ್ ಹೌಸ್ ಆಫೀಸರ್ (ಗಿರ್ವಾನ್) ಪೊಲೀಸ್ ಠಾಣೆಯ ಸಂದೀಪ್ ತಿವಾರಿ ತಿಳಿಸಿದ್ದಾರೆ.
ಸ್ವಲ್ಪ ಸಮಯದ ನಂತರ ಕೋಣೆಯ ಬಾಗಿಲು ತೆರೆದಾಗ, ತಾಯಿಯ ದೇಹವು ಮೂರು ತುಂಡುಗಳಾಗಿ ಬಿದ್ದಿರುವುದನ್ನು ನೋಡಿದ ಹುಡುಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎಂದು ಅವರು ಹೇಳಿದರು.
ರಾಜ್ ಕುಮಾರ್, ಅವರ ಸಹೋದರ ಬೌವಾ ಶುಕ್ಲಾ ಮತ್ತು ರಾಮಕೃಷ್ಣ ಶುಕ್ಲಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಎಸ್ಎಚ್ಒ ತಿಳಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅವರು ಹೇಳಿದರು.
ಏತನ್ಮಧ್ಯೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ಘಟನೆಯ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಹಿಂದಿಯಲ್ಲಿ ಎಕ್ಸ್ ಪೋಸ್ಟ್ ಮಾಡಿರುವ ಯಾದವ್, “ಬಾಂದಾದಲ್ಲಿ ದಲಿತಳ ಅತ್ಯಾಚಾರ ಮತ್ತು ಘೋರ ಕೊಲೆಯ ಸುದ್ದಿ ಹೃದಯ ವಿದ್ರಾವಕವಾಗಿದೆ. ಉತ್ತರ ಪ್ರದೇಶದ ಮಹಿಳೆಯರು ಭಯಭೀತರಾಗಿದ್ದಾರೆ ಮತ್ತು ಕೋಪಗೊಂಡಿದ್ದಾರೆ” ಎಂದಿದ್ದಾರೆ.
ಇದೇ ವೇಳೆ ಐಐಟಿ-ಬಿಎಚ್ಯುನ ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ಅಸಭ್ಯ ವೀಡಿಯೊಗಳನ್ನು ಮಾಡಿದ ಘಟನೆಯನ್ನು ಮಾಜಿ ಮುಖ್ಯಮಂತ್ರಿ ಉಲ್ಲೇಖಿಸಿದರು.
“ಐಐಟಿ-ಬಿಎಚ್ಯುನ ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿದ ನಂತರ ವೀಡಿಯೊ ಮಾಡಿದ ಘಟನೆಯು ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಮುಖಕ್ಕೆ ಕಪಾಳಮೋಕ್ಷವಾಗಿದೆ ಮತ್ತು ಶೂನ್ಯ ಸಹಿಷ್ಣುತೆಯ ಬಿಜೆಪಿಯ ದೊಡ್ಡ ಸುಳ್ಳನ್ನು ಇದು ಬಹಿರಂಗಪಡಿಸುತ್ತದೆ” ಎಂದು ಅವರು ಕಿಡಿಕಾರಿದ್ದಾರೆ.
“ಉತ್ತರ ಪ್ರದೇಶದ ಮಹಿಳೆಯರು ಬಿಜೆಪಿ ಸರ್ಕಾರದ ಮೇಲಿನ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಈಗ ಈ ಸರ್ಕಾರದಿಂದ ಯಾವುದೇ ನಿರೀಕ್ಷೆ ಅರ್ಥಹೀನವಾಗಿದೆ” ಎಂದು ಯಾದವ್ ಹೇಳಿದ್ದಾರೆ.
ಇದೇ ವೆಲೆ ಐಐಟಿ-ಬಿಎಚ್ಯು ವಿದ್ಯಾರ್ಥಿಗಳು ಅತ್ಯಾಚಾರವನ್ನು ಖಂಡಿಸಿ ನಡೆಸುತ್ತಿರುವ ಪ್ರತಿಭಟನೆಯ ವೀಡಿಯೊವನ್ನು ಎಸ್ಪಿ ಮುಖ್ಯಸ್ಥರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.