ಅನೈತಿಕ ಸಂಬಂಧ: ಕೊಲೆ ಕೇಸ್ ನಲ್ಲಿ ಸಿಲುಕಿ ಭವಿಷ್ಯ ಕಳೆದುಕೊಂಡ ಖ್ಯಾತ ಜ್ಯೋತಿಷಿ!

kamalakar bhat
03/02/2026

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಗಲಾಟೆಯು ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಒಟ್ಟು ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ: ಬೆಂಗಳೂರಿನಲ್ಲಿ ವಾಸವಿದ್ದ ಮಹೇಶ್ ನಾಯ್ಕ್ ಎಂಬುವವರ ಪತ್ನಿ ಸುಚಿತ್ರಾ, ಸಿದ್ದಾಪುರದಲ್ಲಿ ನೆಲೆಸಿದ್ದರು. ಈ ವೇಳೆ ಆಕೆಗೆ ಜ್ಯೋತಿಷಿ ಕಮಲಾಕರ್ ಭಟ್ ಎಂಬುವವರ ಪರಿಚಯವಾಗಿ, ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ. ಕಮಲಾಕರ್ ಆಗಾಗ ಸುಚಿತ್ರಾ ಮನೆಗೆ ಬಂದು ಹೋಗುತ್ತಿದ್ದನ್ನು ಆಕೆಯ ಹಿರಿಯ ಮಗಳು ಗಮನಿಸಿ, ತಂದೆ ಹಾಗೂ ಸಂಬಂಧಿಕರಿಗೆ ವಿಷಯ ತಿಳಿಸಿದ್ದಳು.

ಇದರಿಂದ ಕೆರಳಿದ ಸುಚಿತ್ರಾ ತನ್ನ ಮಕ್ಕಳ ಮೇಲೆ ದೌರ್ಜನ್ಯ ಎಸಗಲು ಪ್ರಾರಂಭಿಸಿದ್ದಳು. ಮಗಳ ಮೂಲಕ ವಿಷಯ ತಿಳಿದ ಮಹೇಶ್ ನಾಯ್ಕ್ ತಕ್ಷಣವೇ ಊರಿಗೆ ಬಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರ ಮಧ್ಯಪ್ರವೇಶದ ಬಳಿಕ ಮಗಳನ್ನು ಮಹೇಶ್ ನಾಯ್ಕ ಸಹೋದರ ವಸಂತ್ ನಾಯ್ಕ್ ಅವರ ಮನೆಗೆ ಕರೆದೊಯ್ಯಲಾಗಿತ್ತು ಎನ್ನಲಾಗಿದೆ.

ಕೊಲೆ: ತಮ್ಮ ವಿರುದ್ಧ ದೂರು ನೀಡಿದ ವಿಷಯ ತಿಳಿದು ಆಕ್ರೋಶಗೊಂಡ ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಮತ್ತು ಬೆಂಬಲಿಗರ ಗುಂಪು ವಸಂತ್ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದೆ. ಈ ಸಂಘರ್ಷದಲ್ಲಿ ಮಹೇಶ್ ನಾಯ್ಕ್, ವಸಂತ್ ನಾಯ್ಕ್ ಮತ್ತು ಕುಮಾರ್ ಎಂಬುವವರ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ವಸಂತ್ ನಾಯ್ಕ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಉಳಿದಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡು, ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಸುಚಿತ್ರಾ ಸೇರಿದಂತೆ ಒಟ್ಟು ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version