ಸಾಯಲು ಕೆರೆಗೆ ಹಾರಿ ‘ಕಾಪಾಡು ಆಂಜನೇಯ ಕಾಪಾಡು’ ಎಂದು ಕೂಗಿದ ಮಹಿಳೆ: ಸ್ಥಳೀಯರಿಂದ ರಕ್ಷಣೆ

chikkamagaluru
09/07/2025

ಚಿಕ್ಕಮಗಳೂರು(Mahanayaka):  ಗಂಡನ ಜೊತೆಗೆ ಗಲಾಟೆ ಮಾಡಿ, ಕೋಪದಿಂದ  ಕೆರೆಗೆ ಹಾರಿದ್ದ ಮಹಿಳೆಯೊಬ್ಬರು ಕೆರೆಗೆ ಬಿದ್ದ ನಂತರ   ಆಂಜನೇಯ ಕಾಪಾಡು…. ಆಂಜನೇಯ ಕಾಪಾಡು… ಎಂದು ಬೊಬ್ಬೆ ಹೊಡೆದಿದ್ದು, ನಂತರ ಮಹಿಳೆಯನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರ ಗ್ರಾಮದಲ್ಲಿ ನಡೆದಿದೆ.

ರಂಜಿತಾ (35) ಎಂಬ ಮಹಿಳೆ ತನ್ನ ಗಂಡನ ಜೊತೆಗೆ ಗಲಾಟೆಯಾದ ಬಳಿಕ ಕೋಪದ ಭರದಲ್ಲಿ ಸಾಯಲು ಕೆರೆಗೆ ಹಾರಿದ್ದಾರೆ. ಕೆರೆಗೆ ಬಿದ್ದ ನಂತರ ತನ್ನನ್ನು ಬದುಕಿಸುವಂತೆ  ಆಂಜನೇಯನಿಗೆ ಮೊರೆಯಿಟ್ಟಿದ್ದಾರೆ.  ಆದ್ರೆ ಮಹಿಳೆಯ ಪ್ರಾರ್ಥನೆ ಆಂಜನೇಯನಿಗಿಂತಲೂ ಮೊದಲು ಪಕ್ಕದ ಹೋಂ ಸ್ಟೇ ಮಾಲೀಕ ರಮೇಶ್ ಅವರಿಗೆ ಕೇಳಿಸಿದೆ. ತಕ್ಷಣವೇ ಅವರು ಹುಡುಗರನ್ನು ಕರೆಸಿ ಮಹಿಳೆಯ ರಕ್ಷಣೆಗೆ ಮುಂದಾಗಿದ್ದಾರೆ.

ಸುಮಂತ್ ಮತ್ತು ಪ್ರಸನ್ನ ಎಂಬ ಇಬ್ಬರು ಯುವಕರು ತಕ್ಷಣವೇ ಕೆರೆಗೆ ಹಾರಿ, ಮಹಿಳೆಯ ಪ್ರಾಣ ಉಳಿಸಿದ್ದಾರೆ.  ಈ ಮೂಲಕ ಪ್ರಾಣ ಕಳೆದುಕೊಳ್ಳಲು ಯತ್ನಿಸಿದ್ದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ.

ಕೆರೆಗೆ ಹಾರಿದ ನಂತರ ಮಹಿಳೆ ನೀರಿನಲ್ಲಿ ಮುಳುಗುತ್ತಾ, ತೇಲಾಡುತ್ತಾ, ಕಾಪಾಡು ಆಂಜನೇಯ ಎಂದು ಆಂಜನೇಯನನ್ನ ಬೇಡುತ್ತಿದ್ದರು. ಕೋಪದ ಭರದಲ್ಲಿ ಸಾಯಬೇಕು ಎಂದು ಕೆರೆಗೆ ಹಾರಿದ್ದ ಮಹಿಳೆ ಕೊನೆ ಕ್ಷಣದಲ್ಲಿ ಬದುಕಬೇಕು ಎಂದು ಆಂಜನೇಯನ ನೆನೆದು ಕೂಗಿ ಕರೆದಿದ್ದಾರೆ. ಹೋಂ ಸ್ಟೇ ಮಾಲೀಕ ರಮೇಶ್ ಹಾಗೂ ಸ್ಥಳೀಯ ಯುವಕರು ಮಹಿಳೆಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಚಿಕ್ಕಮಗಳೂರು ಬಸವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version