'ಸಾಗರ ಕವಚ' ಕಾರ್ಯಾಚರಣೆ | ಅನುಮಾನಾಸ್ಪದವಾಗಿ ಕಂಡುಬಂದ ವ್ಯಕ್ತಿಗಳ ವಿಚಾರಣೆ - Mahanayaka
7:59 AM Wednesday 17 - September 2025

‘ಸಾಗರ ಕವಚ’ ಕಾರ್ಯಾಚರಣೆ | ಅನುಮಾನಾಸ್ಪದವಾಗಿ ಕಂಡುಬಂದ ವ್ಯಕ್ತಿಗಳ ವಿಚಾರಣೆ

07/10/2020

ಕಾರವಾರ: ಸಮಾಜಘಾತುಕ ವ್ಯಕ್ತಿಗಳು, ಭಯೋತ್ಪಾದಕರ ದಾಳಿ, ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲಿಸಲು ನಗರದ ವಿವಿಧೆಡೆ ಬುಧವಾರ ‘ಸಾಗರ ಕವಚ’ ಅಣಕು ಕಾರ್ಯಾಚರಣೆ ಹಮ್ಮಿಕೊಳ್ಳಲಾಯಿತು. ಅನುಮಾನಾಸ್ಪದವಾಗಿ ಕಂಡುಬಂದ ವ್ಯಕ್ತಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು.


Provided by

ಪೊಲೀಸ್ ಇಲಾಖೆ, ಕರಾವಳಿ ಕಾವಲು ಪೊಲೀಸ್, ಭಾರತೀಯ ತಟ ರಕ್ಷಣಾ ದಳ ಹಾಗೂ ನೌಕಾಪಡೆ ಸಂಯುಕ್ತವಾಗಿ ಈ ಕಾರ್ಯಾಚರಣೆ ಹಮ್ಮಿಕೊಂಡಿವೆ. ಈ ಅವಧಿಯಲ್ಲಿ ಇಲಾಖೆಗಳ ಸಿದ್ಧತೆಯ ಬಗ್ಗೆ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲಾಗುತ್ತದೆ.

ತುರ್ತು ಸಂದರ್ಭಗಳಲ್ಲಿ ತಕ್ಷಣಕ್ಕೆ ಸ್ಪಂದಿಸುವ ಸಾಮರ್ಥ್ಯ ಹೆಚ್ಚಿಸುವುದು, ನಾಗರಿಕರು ಹಾಗೂ ವಿವಿಧ ರಕ್ಷಣಾ ಇಲಾಖೆಗಳ ನಡುವೆ ಉತ್ತಮ ಸಂಬಂಧ ಮೂಡಿಸುವುದು, ಅಗತ್ಯ ಇರುವಲ್ಲಿ ಶಕ್ತಿಯನ್ನು ಮತ್ತಷ್ಟು ವೃದ್ಧಿಸುವುದು ಈ ಕಾರ್ಯಾಚರಣೆಯ ಉದ್ದೇಶ.

ಕಾರ್ಯಾಚರಣೆಯ ಭಾಗವಾಗಿ ಪೊಲೀಸರು ಕಾಳಿ ನದಿ ಸೇತುವೆಯ ಬಳಿ, ಬೈತಖೋಲ್ ಬಂದರಿಗೆ ಹೋಗುವ ದಾರಿಯಲ್ಲಿ, ರೈಲು ನಿಲ್ದಾಣ, ಕಡಲತೀರಗಳು, ಚರ್ಚ್, ಮಸೀದಿ, ದೇವಸ್ಥಾನಗಳಲ್ಲಿ ಹಾಗೂ ನಗರದ ವಿವಿಧ ಕಡೆಗಳಲ್ಲಿ ತಪಾಸಣೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ ‌ಗಳನ್ನು ಅಳವಡಿಸಿ ವಾಹನಗಳನ್ನು ಪರಿಶೀಲನೆ ಮಾಡಿದರು.

ಬೈತಖೋಲ್ ಬಂದರಿನ ಸುತ್ತಮುತ್ತ ಕೋಸ್ಟ್‌ ಗಾರ್ಡ್ ಸಿಬ್ಬಂದಿ ಮೀನುಗಾರಿಕೆ ದೋಣಿಗಳನ್ನು ಪರಿಶೀಲಿಸಿದರು. ಅದರ ಪರವಾನಗಿ ಸೇರಿದಂತೆ ವಿವಿಧ ದಾಖಲೆಗಳನ್ನು ತಪಾಸಣೆ ಮಾಡಿದರು.

ಈ ಕಾರ್ಯಾಚರಣೆಯು ಗುರುವಾರವೂ ಮುಂದುವರಿಯಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿ